ಹೈದರಾಬಾದ್:ವಿಶ್ವದ ಅತಿದೊಡ್ಡ ಫಿಲ್ಮ್ ಸ್ಟುಡಿಯೋ ಸಂಕೀರ್ಣವಾಗಿರುವ ರಾಮೋಜಿ ಫಿಲ್ಮ್ ಸಿಟಿ ಅಂಗಳದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬುಧವಾರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಟ್ರೋಫಿಯನ್ನು ಪ್ರದರ್ಶನಕ್ಕೆ ತರಲಿದೆ. ರಾಮೋಜಿ ಫಿಲ್ಮ್ ಸಿಟಿ ಆವರಣದಲ್ಲಿರುವ ಕ್ಯಾರಂ ಗಾರ್ಡನ್‌ನಲ್ಲಿ ಟ್ರೋಫಿಯನ್ನು ಸಂಜೆ ಪ್ರದರ್ಶಿಸಲಾಗುತ್ತದೆ. ಫಿಲ್ಮ್ ಸಿಟಿ ಸಂಸ್ಥೆಯ ಉದ್ಯೋಗಿಗಳಿಗೆ ವಿಶೇಷ ವಿಕ್ಷಣೆಯ ಅವಕಾಶವನ್ನು ಮಾಡಿಕೊಡಲಾಗುತ್ತದೆ.
ವಿಶ್ವಕಪ್ನ ವೇಳಾ ಪಟ್ಟಿ ಪ್ರಕಟವಾದಾಗಿನಿಂದ ಟ್ರೋಫಿ ತನ್ನ ವಿಶ್ವ ಪರ್ಯಟನೆಯನ್ನು ಪ್ರಾರಂಭಿಸಿತ್ತು. ಅದರಂತೆ ಜಗತ್ತಿನ ನಾನಾ ದೇಶಗಳು, ವಿಶ್ವದ ಏಳು ಅದ್ಭುತಗಳು ಮತ್ತು ಉತ್ತರ ಧ್ರುವ, ದಕ್ಷಿಣ ಧ್ರುವಕ್ಕೂ ಪ್ರಯಾಣ ಬೆಳೆಸಿತ್ತು. ಪ್ರಚಾರದ ಉದ್ದೇಶದ ಜೊತೆಗೆ ವಿಶ್ವಕಪ್ನ ಮಹತ್ವವನ್ನು ಸಾರುತ್ತಾ ಹೊರಟ ಈ ಪ್ರಯಾಣ ಈಗ ಆತಿಥೇಯ ದೇಶಕ್ಕೆ ಮರಳಿದೆ. ದೇಶದ ನಾನಾ ಪಟ್ಟಣಗಳಲ್ಲಿ ಪ್ರಯಾಣ ಮಾಡುತ್ತಿರುವ ಟ್ರೋಫಿ ನಿನ್ನೆ ಸಿಲಿಕಾನ್ಸಿಟಿಯ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತಲುಪಿತ್ತು. ಬೆಂಗಳೂರು ಮೈದಾನದಲ್ಲಿ ಟ್ರೋಫಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಪ್ರದರ್ಶನಕ್ಕಿಟ್ಟ ಟ್ರೋಫಿಯನ್ನು ಎಲ್ಲರೂ ಮುಟ್ಟಬುಹುದೇ?: ಐಸಿಸಿ ಟ್ರೋಫಿ ಹ್ಯಾಂಡ್ಲಿಂಗ್ ನಿಯಮದ ಪ್ರಕಾರ ಎಲ್ಲರಿಗೂ ಕಪ್ ಮುಟ್ಟವ ಅವಕಾಶವನ್ನು ಕೊಡುವುದಿಲ್ಲ. ಇದಕ್ಕೆ ಮೊದಲೇ ಕೆಲ ವ್ಯಕ್ತಿಗಳಿಗೆ ಮತ್ತು ಗುಂಪಿಗೆ ಅನುಮತಿ ನೀಡಲಾಗಿರುತ್ತದೆ. ಅವರಿಗೆ ಫೋಟೋಗೆ ಮತ್ತು ಮುಟ್ಟಲು ಅವಕಾಶ ನೀಡಲಾಗುತ್ತದೆ. ಅದರಂತೆ, ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಆಟಗಾರರು ಪ್ರಸ್ತುತ ಅಂತಾರಾಷ್ಟ್ರೀಯ ಆಟಗಾರರು ಮತ್ತು ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅಥವಾ ಸಂಬಂಧಿತ ಅರ್ಹತಾ ಈವೆಂಟ್‌ನಲ್ಲಿ ಭಾಗವಹಿಸುವ ಆಟಗಾರರು ನೇರವಾಗಿ ಅರ್ಹರಾಗಿರುತ್ತಾರೆ.