ನವದೆಹಲಿ: ಐಸಿಸಿ ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳ ಟಿಕೆಟ್‌ಗಳು ಇಂದಿನಿಂದ (ಶುಕ್ರವಾರ) ಮಾರಾಟವಾಗಲಿದೆ. ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸೆಮಿಫೈನಲ್ ನಡೆದರೆ, ಫೈನಲ್ ಪಂದ್ಯ ಗುಜರಾತ್ನ ಅಹಮದಾಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ರಾತ್ರಿ 8 ಗಂಟೆಯಿಂದ ಟಿಕೆಟ್‌ಗಳು ಲಭ್ಯವಿದೆ.
ಟಿಕೆಟ್ ಖರೀದಿ ಎಲ್ಲಿ?:https://tickets.cricketworldcup.com ನಲ್ಲಿ ಬುಕಿಂಗ್ಗಳು ಆರಂಭವಾಗಲಿವೆ. ಈ ಹಿಂದೆ ಭಾರತ ತಂಡ ಪ್ರಮುಖ ಪಂದ್ಯಗಳ ಟಿಕೆಟ್ ಮಾರಾಟದ ವೇಳೆ ವೆಬ್ಸೈಟ್ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಸಮಸ್ಯೆ ಉಂಟಾಗಿತ್ತು. ಹೀಗಾಗಿ ಈ ಬಾರಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕೆಲವು ಸುಧಾರಣೆಗಳನ್ನು ಮಾಡಿಕೊಳ್ಳುವ ಅಗತ್ಯವಿದೆ. ಕಳೆದ ಬಾರಿ ಟಿಕೆಟ್ ಮಾರಾಟ ಆರಂಭವಾದ ಗಂಟೆಗೂ ಮುನ್ನವೇ ಸೋಲ್ಡ್ಔಟ್ ಎಂದು ಬಂದಿದ್ದು ಅಭಿಮಾನಿಗಳ ನಿರಾಸೆಯಾಗಿತ್ತು.
ಅಂತರರಾಷ್ಟ್ರೀಯ ಅಗ್ರ 10 ಶ್ರೇಯಾಂಕಿತ ತಂಡಗಳು ಲೀಗ್ ಹಂತದಲ್ಲಿ ಪೈಪೋಟಿ ನಡೆಸಿ ಅಂತಿಮ ಘಟ್ಟ ಪ್ರವೇಶಿಸಲಿವೆ. 10 ವರ್ಷಗಳಿಂದ ಐಸಿಸಿ ಪ್ರಶಸ್ತಿ ಗೆಲ್ಲದೇ ಇರುವ ಭಾರತ ತಂಡಕ್ಕೆ ತವರಿನಲ್ಲಿ ಆಯೋಜನೆ ಆಗಿರುವ ವಿಶ್ವಕಪ್ ಗೆಲ್ಲುವ ಗುರಿ ಇದೆ. ಅಕ್ಟೋಬರ್ 5 ರಿಂದ ವಿಶ್ವಕಪ್ ಪಂದ್ಯಗಳು ಆರಂಭವಾಗಲಿವೆ. ಮೊದಲ ಪಂದ್ಯದಲ್ಲಿ 2019ರ ಫೈನಲ್ ಆಡಿದ್ದ ಇಂಗ್ಲೆಂಡ್-ನ್ಯೂಜಿಲೆಂಡ್ ಸೆಣಸಾಡಲಿವೆ. ನೆವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಡೆಯಲಿದೆ.
"ಪುರುಷರ ಕ್ರಿಕೆಟ್ ವಿಶ್ವಕಪ್ 10 ಸ್ಪರ್ಧಾತ್ಮಕ ರಾಷ್ಟ್ರಗಳಾದ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ, ನೆದರ್ಲ್ಯಾಂಡ್ಸ್ ನಡುವೆ ನಡೆಯಲಿದೆ. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಏಕದಿನ ಕ್ರಿಕೆಟ್ನ ಅತ್ಯುತ್ತಮ ಪಂದ್ಯಗಳನ್ನು ನೋಡಲಿದ್ದೇವೆ. ಭಾರತದಲ್ಲಿ ಎಲ್ಲಾ ಪಂದ್ಯಗಳನ್ನು ಆಯೋಜಿಸಲಾಗಿದ್ದು, ಕ್ರಿಕೆಟ್ನ ಐತಿಹಾಸಿಕ ಕ್ಷಣಗಳಲ್ಲಿ ಪಾಲ್ಗೊಳ್ಳಲು ಅವಕಾಶಗಳು ತೆರೆದಿವೆ" ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.