ಹೈದರಾಬಾದ್: ಐಸಿಸಿಯಿಂದ ಪ್ರತಿ ವರ್ಷ ಕೊಡಲಾಗುವ ಹಾಲ್ ಆಫ್ ಫೇಮ್ ಗೌರವಕ್ಕೆ ಈ ವರ್ಷ ಭಾರತದ ಇಬ್ಬರು ಲೆಜೆಂಡರಿ ಆಟಗಾರರು ಮತ್ತು ಓರ್ವ ಶ್ರೀಲಂಕಾ ಆಟಗಾರನ ಹೆಸರನ್ನು ತೆಗೆದುಕೊಳ್ಳಲಾಗಿದೆ. ಭಾರತದ ಲೆಜೆಂಡರಿ ಓಪನರ್ ವೀರೇಂದ್ರ ಸೆಹ್ವಾಗ್, ಮಾಜಿ ಭಾರತೀಯ ಮಹಿಳಾ ಟೆಸ್ಟ್ ನಾಯಕಿ ಡಯಾನಾ ಎಡುಲ್ಜಿ ಮತ್ತು ಶ್ರೀಲಂಕಾದ ಐಕಾನಿಕ್ ಸ್ಟಾರ್ ಅರವಿಂದ ಡಿ ಸಿಲ್ವಾ ಐಸಿಸಿ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಈ 3 ಸೇರ್ಪಡೆಗಳೊಂದಿಗೆ, ಈಗ ಐಸಿಸಿ ಹಾಲ್ ಆಫ್ ಫೇಮ್ ಪಟ್ಟಿಯಲ್ಲಿ 112 ಕ್ರಿಕೆಟಿಗರು ಇರಲಿದ್ದಾರೆ. ಈ ಪಟ್ಟಿಯಲ್ಲಿರುವ ಭಾರತದ 8 ಆಟಗಾರರಿದ್ದಾರೆ. ಅವರೆಂದರೆ ಸುನಿಲ್ ಗವಾಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿನೂ ಮಂಕಡ್, ಡಯಾನಾ ಎಡುಲ್ಜಿ, ವೀರೇಂದ್ರ ಸೆಹ್ವಾಗ್.
ವೀರೇಂದ್ರ ಸೆಹ್ವಾಗ್: 1999 ರಿಂದ 2015 ರಲ್ಲಿ ಟೀಮ್ ಇಂಡಿಯಾಕ್ಕೆ ಉತ್ತಮ ಆರಂಭ ನೀಡಿದ ಆಟಗಾರ ವಿರೇಂದ್ರ ಸೆಹ್ವಾಗ್. ವಿರು ಹೆಸರು ಕೇಳಿದರೆ ಎಲ್ಲರೂ ಹೇಳುವ ಒಂದು ಮಾತು ಬೌಲರ್ ಯಾರೆಂದು ನೋಡದೇ ಮೊದಲ ಬಾಲ್ನ್ನೇ ಸಿಕ್ಸ್ಗೆ ಕಳಿಸುವ ಬ್ಯಾಟರ್. ಯಾವಾಗಲೂ ಕ್ರೀಸ್ನಲ್ಲಿ ಹಾಡು ಗುನುಗುತ್ತಾ, ಬೌಂಡರಿ ಸಿಕ್ಸರ್ಗಳ ಮಳೆಯನ್ನೇ ಸುರಿಸುತ್ತಿದ್ದ ಆಟಗಾರ. ಭಾರತ ಹಿಂದೆಂದೂ ಹಾಗೇ ಮುಂದೆಯೂ ಇಂತಹ ಡೇರಿಂಗ್ ಓಪನಿಂಗ್ ಬ್ಯಾಟರ್ ನನ್ನು ಹೊಂದುವುದು ಅನುಮಾನ.
ವೀರೇಂದ್ರ ಸೆಹ್ವಾಗ್ 104 ಟೆಸ್ಟ್‌ಗಳನ್ನು ಆಡಿದ್ದು, 49.34ರ ಸರಾಸರಿಯಲ್ಲಿ 8,586 ರನ್ ಕಲೆ ಹಾಕಿದ್ದಲ್ಲದೇ ಬೌಲಿಂಗ್ನಲ್ಲಿ 40 ವಿಕೆಟ್ ಪಡೆದಿದ್ದಾರೆ. 251 ಏಕದಿನ ಪಂದ್ಯಗಳಿಂದ 35.05ರ ಸರಾಸರಿಯಲ್ಲಿ 8,273 ರನ್ ಗಳಿಸಿ, 96 ವಿಕೆಟ್ ಪಡೆದಿದ್ದಾರೆ. 19 ಟಿ-20 ಆಡಿರುವ ವೀರು 21.88 ಸರಾಸರಿಯಲ್ಲಿ 394 ರನ್ ಗಳಿಸಿದ್ದಾರೆ. ಟೆಸ್ಟ್ನಲ್ಲಿ ತ್ರಿಶತಕ ಗಳಿಸಿದ ನಾಲ್ಕನೇ ಆಟಗಾರ ಸೆಹ್ವಾಗ್. ಡಾನ್ ಬ್ರಾಡ್ಮನ್, ಬ್ರಿಯಾನ್ ಲಾರಾ ಮತ್ತು ಕ್ರಿಸ್ ಗೇಲ್ ಹೆಸರಿನಲ್ಲಿ ಉಳಿದ ಮೂರು ತ್ರಿಶತಕಗಳಿವೆ. ಸೆಹ್ವಾಗ್ ಎರಡು ತ್ರಿಶತಕ ಗಳಿಸಿದ್ದಾರೆ.