ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಗಾಜಾದಲ್ಲಿನ ಪ್ಯಾಲಿಸ್ತೇನ್ ಸಂತ್ರಸ್ತರ ಬಗ್ಗೆ ಜಾಗೃತಿ ಮೂಡಿಸಲು ಮುಂದಾದ ಆಸ್ಟ್ರೇಲಿಯಾದ ಬ್ಯಾಟರ್ ಉಸ್ಮಾನ್ ಖವಾಜಾಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅನುಮತಿ ನಿರಾಕರಿಸಿದೆ. ಖವಾಜಾ ತಮ್ಮ ಬ್ಯಾಟ್ ಮತ್ತು ಶೂ ಮೇಲೆ ಪಾರಿವಾಳ ಹಾಗೂ ಆಲಿವ್ ಕೊಂಬೆಯ ಸ್ಟಿಕ್ಕರ್ ಹಾಕಿಕೊಳ್ಳಲು ಐಸಿಸಿ ವಿರೋಧಿಸಿದೆ.
ಐಸಿಸಿ ನಿಯಮಗಳ ಪ್ರಕಾರ ಆಟಗಾರರು ಮತ್ತು ತಂಡದ ಅಧಿಕಾರಿಗಳು ತಮ್ಮ ಉಡುಪು ಅಥವಾ ಸಲಕರಣೆಗಳ ಮೇಲೆ ವೈಯಕ್ತಿಕ ಸಂದೇಶ ಪ್ರದರ್ಶಿಸಲು ನಿಷೇಧವಿದೆ. ವರದಿಗಳ ಪ್ರಕಾರ, ಎಡಗೈ ಬ್ಯಾಟರ್ ಖವಾಜಾ ಪಾಕ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಹಿನ್ನೆಲೆಯಲ್ಲಿ ಭಾನುವಾರ ಅಭ್ಯಾಸದ ವೇಳೆ ತಮ್ಮ ಶೂ ಹಾಗೂ ಬ್ಯಾಟ್‌ನ ಹಿಂಭಾಗದಲ್ಲಿ ಅಂತಹ ಲೋಗೋ ಹೊಂದಿರುವುದು ಕಂಡುಬಂದಿತ್ತು. ಈ ಲೋಗೋ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯೊಂದರಲ್ಲಿನ ಉಲ್ಲೇಖವನ್ನು ಸಾರುವಂತಿತ್ತು. 'ಎಲ್ಲಾ ಮಾನವರು ಸ್ವತಂತ್ರ, ಘನತೆ ಮತ್ತು ಹಕ್ಕುಗಳೊಂದಿಗೆ ಸಮಾನವಾಗಿ ಜನಿಸಿದ್ದಾರೆ. ಎಲ್ಲರೂ ಆತ್ಮಸಾಕ್ಷಿ ಹೊಂದಿದ್ದು, ಒಬ್ಬರಿಗೊಬ್ಬರು ಸಹೋದರತ್ವ ಮನೋಭಾವದಿಂದ ವರ್ತಿಸಬೇಕು' ಎಂಬುದಾಗಿದೆ.
ಪಾಕ್ ವಿರುದ್ಧದ 3 ಪಂದ್ಯಗಳ ಸರಣಿಯ ಉಳಿದೆರಡು ಮ್ಯಾಚ್ಗಳಿಗೆ ತಮ್ಮ ಬ್ಯಾಟ್ ಮೇಲೆ ವೈಯಕ್ತಿಕ ಸಂದೇಶದ ಲೋಗೋ ಹಾಕಿಕೊಳ್ಳಲು ಖವಾಜಾ ಮಾಡಿದ್ದ ಮನವಿಗೆ ಐಸಿಸಿ ಅನುಮೋದನೆ ನೀಡಿಲ್ಲ. ಇಂತಹ ವೈಯಕ್ತಿಕ ಸಂದೇಶ ಸಾರಲು ಉಡುಪು ಮತ್ತು ಸಲಕರಣೆಗಳ ನಿಯಮಾವಳಿಗಳ ಷರತ್ತು- ಎಫ್ ಪ್ರಕಾರ ಅನುಮತಿ ಇಲ್ಲ. ಈ ಕುರಿತಂತೆ ಐಸಿಸಿ ಪ್ಲೇಯಿಂಗ್ ಷರತ್ತುಗಳ ಅಡಿ ಉಲ್ಲೇಖಿಸಲಾಗಿದೆ. ಆಟದ ಹೊರತಾಗಿ ಇತರ ವೇದಿಕೆಗಳನ್ನು ಆಟಗಾರರು ಇಂತಹ ಶಾಂತಿ, ಸಮಾನತೆ, ಹಕ್ಕುಗಳು, ಮತ್ತು ಇತರ ವಿಚಾರಗಳ ಬಗ್ಗೆ ಜಾಗೃತಿಗೆ ಮುಂದಾದರೆ ಐಸಿಸಿ ಕೂಡ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಕ್ತಾರರು ತಿಳಿಸಿದ್ದಾರೆ.