ಹೈದರಾಬಾದ್, ತೆಲಂಗಾಣ: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯ ವೀಕ್ಷಿಸಲು ಪ್ರೇಕ್ಷಕರು ಕಿಕ್ಕರಿದು ತುಂಬಿದ್ದಾರೆ. ಟಾಸ್ ಗೆದ್ದಿರುವ ಶ್ರೀಲಂಕಾ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಹೈದರಾಬಾದ್ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಸಹಾಯವಾಗುತ್ತದೆ. ಅಭ್ಯಾಸ ಪಂದ್ಯಗಳು ಸೇರಿದಂತೆ ಈ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ. ಕಳೆದ ಐದು ಪಂದ್ಯಗಳಲ್ಲಿ ಈ ಪಿಚ್‌ನಲ್ಲಿ ಸರಾಸರಿ ಸ್ಕೋರ್ 296 ಆಗಿದೆ.
ಹೈದರಾಬಾದ್‌ನಲ್ಲಿ ಸ್ಪಿನ್ ಬೌಲರ್‌ಗಳು ಪ್ರಮುಖರಾಗಿದ್ದಾರೆ. ಎರಡೂ ತಂಡಗಳು ತಮ್ಮ ಸ್ಪಿನ್ ಬೌಲರ್‌ಗಳಿಂದ ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತವೆ. ಬಾಬರ್ ಅಜಮ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ಮೊದಲ ಪಂದ್ಯದಲ್ಲಿ ನೆದರ್ಲೆಂಡ್ಸ್ ಅನ್ನು ಸೋಲಿಸಿತು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಸೋತಿದೆ. ಒಟ್ಟಾರೆ ವಿಶ್ವಕಪ್‌ನ ದಾಖಲೆಯನ್ನು ಗಮನಿಸಿದರೆ ಶ್ರೀಲಂಕಾ ವಿರುದ್ಧ ಪಾಕಿಸ್ತಾನದ ದಾಖಲೆ ಅತ್ಯುತ್ತಮವಾಗಿದೆ. ಇವರಿಬ್ಬರ ನಡುವೆ ಇದುವರೆಗೆ 8 ಪಂದ್ಯಗಳು ನಡೆದಿದ್ದು, ಏಳು ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದು, ಒಂದು ಪಂದ್ಯ ಮಾತ್ರ ಫಲಿತಾಂಶವಿಲ್ಲದೇ ರದ್ದಾಗಿದೆ.
ನೆದರ್ಲೆಂಡ್ಸ್ ವಿರುದ್ಧ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಫಖರ್ ಜಮಾನ್ ಕಳೆದ 10 ಇನ್ನಿಂಗ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡು ಬಂದಿಲ್ಲ. ಹೀಗಾಗಿ ಈ ಪಂದ್ಯದಲ್ಲಿ ಅವರನ್ನು ಕೈ ಬಿಡಲಾಗಿದ್ದು, ಅವರ ಬದಲಿಗೆ ಅಬ್ದುಲ್ಲಾ ಶಫೀಕ್ಗೆ ಅವಕಾಶ ನೀಡಿದ್ದಾರೆ. ಇನ್ನು ನಾಯಕ ಬಾಬರ್ ಅಜಮ್ ಕೂಡ ಭಾರತದ ನೆಲದಲ್ಲಿ ದೊಡ್ಡ ಇನ್ನಿಂಗ್ಸ್ ಆಡಲು ಬಯಸುತ್ತಿದ್ದಾರೆ. ಬಾಬರ್ ಅಜಮ್ ಮೊದಲ ಪಂದ್ಯದಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು.