ಧರ್ಮಶಾಲಾ (ಹಿಮಾಚಲ ಪ್ರದೇಶ): ದೆಹಲಿ ಮೈದಾನದಲ್ಲಿ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನಕ್ಕೆ ಮಣಿದರೆ, ನೆದರ್ಲೆಂಡ್ ಎದುರು ಬೃಹತ್ ಹ್ಯಾಟ್ರಿಕ್ ಜಯದ ಆಸೆಯಲ್ಲಿದ್ದ ದಕ್ಷಿಣ ಆಫ್ರಿಕಾ ಹೀನಾಯ ಸೋಲು ಕಂಡಿತು. ಡಚ್ಚರ ಕರಾರುವಾಕ್ ದಾಳಿಗೆ ಹರಿಣಗಳು ತತ್ತರಿಸಿ ಹೋದರು. ನೆದರ್ಲೆಂಡ್ ನೀಡಿದ್ದ 246 ರನ್ ಗುರಿ ಬೆನ್ನತ್ತಿದ ಬವುಮಾ ಪಡೆ 42.5 ಓವರ್ಗಳಲ್ಲಿ 207 ರನ್ಗಳಿಗೆ ಸರ್ವಪತನ ಕಂಡಿತು. ಇದರಿಂದ ಡಚ್ಚರು 38 ರನ್‌ಗಳಿಂದ ರೋಚಕ ಗೆಲುವು ದಾಖಲಿಸಿದರು. 2023ರ ವಿಶ್ವಕಪ್‌ನಲ್ಲಿದು ಎರಡನೇ ಅಚ್ಚರಿಯ ಫಲಿತಾಂಶವಾಗಿದೆ.
ಮಳೆ ಬಂದ ಕಾರಣ ಎರಡು ಗಂಟೆ ತಡವಾಗಿ ಪಂದ್ಯ ಆರಂಭವಾದ ಕಾರಣ ಡಿಎಲ್ಎಸ್ ನಿಯಮದನ್ವಯ 43 ಓವರ್‌ಗಳಿಗೆ ಪಂದ್ಯವನ್ನು ಕಡಿತ ಮಾಡಲಾಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ನಾಯಕ ಸ್ಕಾಟ್ ಎಡ್ವರ್ಡ್ಸ್ ಅವರ ಅರ್ಧಶತಕ ಮತ್ತು ಕೆಳ ಕ್ರಮಾಂಕದ ಬ್ಯಾಟರ್ಗಳ ನೆರವಿನಿಂದ ನಿಗದಿತ ಓವರ್‌ಗಳ ಅಂತ್ಯದ ವೇಳೆಗೆ 8 ವಿಕೆಟ್ ನಷ್ಟಕ್ಕೆ ತಂಡ 245 ರನ್ ಕಲೆಹಾಕಿತು.
ಇದನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾಕ್ಕೆ ಆರಂಭಿಕ ಆಘಾತದ ಜೊತೆ ಸರಣಿ ಆಘಾತವೂ ಆಯಿತು. ಕಳೆದ ಎರಡು ಪಂದ್ಯಗಳಲ್ಲಿ ಅಬ್ಬರದ ಇನ್ನಿಂಗ್ಸ್ ಆಡಿದ್ದ ಆಟಗಾರರು ಬಾಲ ಮುದುರಿಕೊಂಡು ಪೆವಿಲಿಯನ್ಗೆ ತೆರಳಿದರು. ಎರಡು ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಇಂದು 20 ರನ್ಗೆ ಸುಸ್ತಾಗಿದ್ದರು. ಸತತ ಎರಡು ಪಂದ್ಯಗಳಲ್ಲಿ ವಿಫಲತೆ ಕಂಡಿರುವ ಹರಿಣಗಳ ನಾಯಕ ತೆಂಬಾ ಬವುಮಾ (16) ಇಂದು ಸಹ ದೊಡ್ಡ ಇನ್ನಿಂಗ್ಸ್ ಕಟ್ಟಲಿಲ್ಲ.