ಕರ್ನಾಟಕ

karnataka

ETV Bharat / sports

ವಿಶ್ವಕಪ್​: ಸ್ಕಾಟ್ ಎಡ್ವರ್ಡ್ಸ್ ಅರ್ಧಶತಕ; ದ.ಆಫ್ರಿಕಾಗೆ 246 ರನ್ ಗುರಿ ನೀಡಿದ ನೆದರ್ಲೆಂಡ್‌

ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ಇಂದು ದಕ್ಷಿಣ ಆಫ್ರಿಕಾ- ನೆದರ್ಲೆಂಡ್‌ ಕ್ರಿಕೆಟ್‌ ತಂಡಗಳ ನಡುವೆ ಏಕದಿನ ವಿಶ್ವಕಪ್ ಪಂದ್ಯ ನಡೆಯುತ್ತಿದೆ.

ICC Cricket World Cup 2023
ICC Cricket World Cup 2023

By ETV Bharat Karnataka Team

Published : Oct 17, 2023, 2:56 PM IST

Updated : Oct 17, 2023, 8:08 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ):ಏಕದಿನ ಕ್ರಿಕೆಟ್ವಿಶ್ವಕಪ್​ನಲ್ಲಿ ಈವರೆಗೆ ಸತತ ಮೂರು ಬೃಹತ್​ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ವಿರುದ್ಧ ಇಂದು ನೆದರ್ಲೆಂಡ್‌ ತನ್ನ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪಂದ್ಯಾರಂಭದಿಂದ ಎಲ್ಲಾ ಬ್ಯಾಟರ್​ಗಳು ರನ್​ ಗಳಿಸುವಲ್ಲಿ ಪರದಾಡಿದರೆ ಕೆಳ ಕ್ರಮಾಂಕದಲ್ಲಿ ನಾಯಕ ಸ್ಕಾಟ್ ಎಡ್ವರ್ಡ್ಸ್ ಗಳಿಸಿದ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ತಂಡ ನಿಗದಿತ 43 ಓವರ್‌ಗಳ​ ಮುಕ್ತಾಯಕ್ಕೆ 8 ವಿಕೆಟ್​ ಕಳೆದುಕೊಂಡು 245 ರನ್​​ ಗಳಿಸಿತು.

ಭಾರತದ ಅತ್ಯಂತ ಸುಂದರ ಮೈದಾನ ಹಿಮಾಚಲದ ಧರ್ಮಾಶಾಲಾದಲ್ಲಿ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಪಂದ್ಯ ಎರಡು ಗಂಟೆ ತಡವಾಗಿ ಶುರುವಾಯಿತು. ಎರಡೂ ಇನ್ನಿಂಗ್ಸ್‌ನಿಂದ ತಲಾ 7 ಓವರ್​ ಕಡಿತ ಮಾಡಿ ಪಂದ್ಯ ಆಡಿಸಲಾಗುತ್ತಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ನೆದರ್ಲೆಂಡ್ ಮುಂದೆ ಎರಡು ಅವಕಾಶವಿತ್ತು. ಒಂದು ವಿಕೆಟ್​ ಕಾಯ್ದುಕೊಳ್ಳುವುದು, ಮತ್ತೊಂದು ರನ್​ ಗಳಿಕೆ. ಡಚ್ಚರು ವಿಕೆಟ್​ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ರನ್​ ಕದಿಯಲಾಗದೇ ವಿಕೆಟ್​ ಕೈಚೆಲ್ಲುತ್ತಾ ಸಾಗಿದರು. ಆರಂಭದಲ್ಲಿ ಆಟಗಾರರಿಗೆ ಜೊತೆಯಾಟ ನೀಡಲು ದಕ್ಷಿಣ ಆಫ್ರಿಕಾ ಬೌಲರ್​ಗಳು ಬಿಡಲಿಲ್ಲ. ಹೀಗಿದ್ದರೂ ಬ್ಯಾಟರ್‌ಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರನ್ ಕದಿಯಲು ಪ್ರಯತ್ನಿಸಿದರು. ಅಂತಿಮವಾಗಿ ನಾಯಕನ ಏಕಾಂಗಿ ಪ್ರದರ್ಶನದ ನೆರವಿನಿಂದ ತಂಡ 200 ರನ್‌ಗಳ ಗಡಿ ದಾಟಿತು.

ತಂಡ ಒಂದೆಡೆ 20ನೇ ಓವರ್‌ ವೇಳೆಗೆ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಯಕ ಎಡ್ವರ್ಡ್ಸ್ ಜಾಗರೂಕತೆಯ ಇನ್ನಿಂಗ್ಸ್​ ಕಟ್ಟಿದರು. 6,7 ಮತ್ತು 8ನೇ ವಿಕೆಟ್ ​ಜತೆ ಪಾಲುದಾರಿಗೆ ಮಾಡಿ ತಮ್ಮ ಅರ್ಧಶತಕದಾಟವಾಡಿದರು. 7ನೇ ವಿಕೆಟ್​ಗೆ ನಾಯಕನೊಂದಿಗೆ ಸೇರಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ 64 ರನ್​ಗಳ ಜೊತೆಯಾಟ ನೀಡಿದರು.

ವ್ಯಾನ್ ಡೆರ್ ಮೆರ್ವೆ 29 ರನ್ ಪೇರಿಸಿದರು. ಸ್ಕಾಟ್ ಎಡ್ವರ್ಡ್ಸ್ ಎಂಟನೇ ವಿಕೆಟ್​ ಜತೆಯೂ ಪಾಲುದಾರಿಕೆ ಮಾಡಿ ಅಜೇಯವಾಗುಳಿದರು. ಇನ್ನಿಂಗ್ಸ್​ನಲ್ಲಿ 69 ಎಸೆತ​ ಎದುರಿಸಿ 10 ಬೌಂಡರಿ ಮತ್ತು 1 ಸಿಕ್ಸ್​ನ ಸಹಾಯದಿಂದ 78 ರನ್ ಕಲೆಹಾಕಿದರು. 9ನೇ ಕ್ರಮಾಂಕದ ಆಟಗಾರ ಆರ್ಯನ್ ದತ್ತ್ 9 ಎಸೆತಗಳಲ್ಲಿ 3 ಸಿಕ್ಸರ್‌ಸಹಿತ 23 ರನ್​ಗಳ ಅಜೇಯ ಚುಟುಕು ಇನ್ನಿಂಗ್ಸ್​ ಆಡಿದರು. ಇವರುಗಳ ಬ್ಯಾಟಿಂಗ್​ ನೆರವಿನಿಂದ ನೆದರ್ಲೆಂಡ್​ 43 ಓವರ್​​ (ಡಿಎಲ್​ಎಸ್​ ನಿಯಮದಂತೆ) ಅಂತ್ಯಕ್ಕೆ 8 ವಿಕೆಟ್​ ನಷ್ಟಕ್ಕೆ 245 ರನ್​ ಸೇರಿಸಿದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜೆನ್ಸೆನ್, ಕಗಿಸೊ ರಬಾಡಾ ಮತ್ತು ಲುಂಗಿ ಎನ್‌ಗಿಡಿ ತಲಾ ಎರಡು ವಿಕೆಟ್​ ಪಡೆದರೆ, ಕೇಶವ್ ಮಹಾರಾಜ್ ಮತ್ತು ಜೆರಾಲ್ಡ್ ಕೋಟ್ಜಿ ಒಂದೊಂದು ವಿಕೆಟ್ ಪಡೆದರು.

ಇದನ್ನೂ ಓದಿ:ಐಸಿಸಿ ಏಕದಿನ ವಿಶ್ವಕಪ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟ

Last Updated : Oct 17, 2023, 8:08 PM IST

ABOUT THE AUTHOR

...view details