ಮುಂಬೈ (ಮಹಾರಾಷ್ಟ್ರ): ಇಂಗ್ಲೆಂಡ್ ವಿರುದ್ಧದ ಹೊಡಿಬಡಿ ಇನ್ನಿಂಗ್ಸ್ ಅನ್ನೇ ದಕ್ಷಿಣ ಆಫ್ರಿಕಾ ತಂಡ ಇಂದು ಬಾಂಗ್ಲಾದೇಶದ ವಿರುದ್ಧವೂ ಪ್ರಯೋಗಿಸಿತು. ಕ್ವಿಂಟನ್ ಡಿ ಕಾಕ್ ಶತಕ, ಐಡೆನ್ ಮಾರ್ಕ್ರಾಮ್ ಮತ್ತು ಹೆನ್ರಿಚ್ ಕ್ಲಾಸೆನ್ ಅವರ ಅರ್ಧಶತಕದಾಟದಿಂದ 50 ಓವರ್‌ಗಳಂತ್ಯಕ್ಕೆ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 382 ರನ್ ಕಲೆಹಾಕಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಮಾತನಾಡುತ್ತಾ, ಇಂಗ್ಲೆಂಡ್ ವಿರುದ್ಧ ಆಡಿದ ಇನ್ನಿಂಗ್ಸ್ ಅನ್ನೇ ಆಡಬಯಸುತ್ತೇವೆ. ಅದಕ್ಕಾಗಿ ಮೊದಲು ಬ್ಯಾಟಿಂಗ್ ಮಾಡುತ್ತೇವೆ ಎಂದು ಹೇಳಿದ್ದರು. ಅದರಂತೆ ಮೊದಲು ಬ್ಯಾಟಿಂಗ್ಗೆ ಮೈದಾನಕ್ಕಿಳಿದ ಹರಿಣಗಳಿಗೆ ಬಾಂಗ್ಲಾ ಟೈಗರ್ಸ್ ಶಾಕ್ ನೀಡಿದರು.
ವಾಂಖೆಡೆ ಪಿಚ್ನಲ್ಲಿ ಆರಂಭಿಕರನ್ನು ಅಬ್ಬರಿಸದಂತೆ ಯಶಸ್ವಿಯಾಗಿ ಕಟ್ಟಿಹಾಕಿದ್ದಲ್ಲದೇ, ಎರಡು ವಿಕೆಟ್ ಸಹ ಕಬಳಿಸಿ ಒತ್ತಡ ಹೇರಿದರು. ರೀಜಾ ಹೆಂಡ್ರಿಕ್ಸ್ (12) ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (1) ವಿಕೆಟ್ ನಷ್ಟದಿಂದ ತಂಡ ಮೊದಲ ಪವರ್ ಪ್ಲೇ ಅಂತ್ಯಕ್ಕೆ 44 ರನ್ ಮಾತ್ರ ಗಳಿಸಿತ್ತು.
ಡಿ ಕಾಕ್, ಮಾರ್ಕ್ರಾಮ್ ಶತಕದ ಜತೆಯಾಟ: ಎರಡು ವಿಕೆಟ್ ಕುಸಿದರೂ ನಂತರ ಮೂರನೇ ವಿಕೆಟ್‌ಗೆ ಒಂದಾದ ಕ್ವಿಂಟನ್ ಡಿ ಕಾಕ್ ಮತ್ತು ನಾಯಕ ಐಡೆನ್ ಮಾರ್ಕ್ರಾಮ್ ಪಿಚ್ಗೆ ಹೊಂದಿಕೊಂಡ ನಂತರ ಅಬ್ಬರದ ಇನ್ನಿಂಗ್ಸ್ ಆರಂಭಿಸಿದರು. 25ನೇ ಓವರ್ಗೆ ತಂಡ 131 ರನ್ ಗಳಿಸಿತು. ನಂತರ ಈ ಜೋಡಿ ರನ್ ಗಳಿಸುವ ವೇಗ ಹೆಚ್ಚಿಸಿದರು. ಮಾರ್ಕ್ರಾಮ್ ತಾಳ್ಮೆಯ ಇನ್ನಿಂಗ್ಸ್ ಆಡುತ್ತಾ ಡಿ ಕಾಕ್ಗೆ ಅವಕಾಶ ನೀಡುತ್ತಾ ಬಂದರು. ಐಡೆನ್ ಮಾರ್ಕ್ರಾಮ್ 69 ಬಾಲ್ ಆಡಿ 7 ಬೌಂಡರಿಯ ಸಹಾಯದಿಂದ 60 ರನ್ ಗಳಿಸಿ ವಿಕೆಟ್ ಕೊಟ್ಟರು. ಇದರಿಂದ ಈ ಜೋಡಿಯ 131 ರನ್‌ಗಳ ಪಾಲುದಾರಿಕೆ ಅಂತ್ಯವಾಯಿತು.
ದ್ವಿಶತಕದ ಅಂಚಿನಲ್ಲಿ ಎಡವಿದ ಡಿ ಕಾಕ್: ಕ್ವಿಂಟನ್ ಡಿ ಕಾಕ್ ಏಕದಿನ ವಿಶ್ವಕಪ್ನ ಮೂರನೇ ಶತಕ ದಾಖಲಿಸಿದರು. ನಂತರ ರನ್ ಗತಿಗೆ ವೇಗ ನೀಡಿದರು. ವಾಂಖೆಡೆ ಮೈದಾನದಲ್ಲಿ ಸಿಕ್ಸರ್, ಬೌಂಡರಿಗಳ ಮಳೆ ಸುರಿಸಿದರು. ಇವರಿಗೆ ನಾಲ್ಕನೇ ವಿಕೆಟ್‌ಗೆ ಸಾಥ್ ನೀಡಿದ ಹೆನ್ರಿಚ್ ಕ್ಲಾಸೆನ್ ಇಂಗ್ಲೆಂಡ್ ವಿರುದ್ಧದ ಶತಕದ ಇನ್ನಿಂಗ್ಸ್ನ ಬ್ಯಾಟಿಂಗ್ ಶೈಲಿಯನ್ನೇ ಇಲ್ಲೂ ಮುಂದುವರೆಸಿದರು. ಇಬ್ಬರೂ ಬ್ಯಾಟರ್ಗಳು ಎರಡು ತುದಿಯಲ್ಲಿ ದೊಡ್ಡ ಹೊಡೆತಗಳನ್ನೇ ಆಡಿದರು. ಶತಕ ಸಾಧಿಸಿದ ಡಿ ಕಾಕ್ ದ್ವಿಶತಕದತ್ತ ದಾಪುಗಾಲು ಹಾಕುತ್ತಿದ್ದಾಗ ಕ್ಯಾಚ್ ಕೊಟ್ಟು ಔಟಾದರು. 26 ರನ್ನಿಂದ ವಿಶ್ವಕಪ್ನ 3ನೇ ದ್ವಿಶತಕ ದಾಖಲಿಸುವ ಅವಕಾಶ ಕೈಚೆಲ್ಲಿದರು. ಇನ್ನಿಂಗ್ಸ್ನಲ್ಲಿ ಡಿ ಕಾಕ್ 140 ಬಾಲ್ ಎದುರಿಸಿ 15 ಬೌಂಡರಿ, 7 ಸಿಕ್ಸ್ನಿಂದ 174 ರನ್ ಕಲೆಹಾಕಿದರು.
ಮಿಲ್ಲರ್, ಕ್ಲಾಸೆನ್ ಜತೆಯಾಟ: ಕೊನೆಯ ಐದು ಓವರ್‌ಗಳಿದ್ದಾಗ ಒಂದಾದ ಹೆನ್ರಿಚ್ ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ 65 ರನ್ ಜತೆಯಾಟ ಕಟ್ಟಿದರು. ಎದುರಾಳಿಗಳ ಮೇಲೆ ಭರ್ಜರಿ ಹಿಟ್ಗಳ ಮೂಲಕ ಸವಾರಿ ಮಾಡಿದ ಬ್ಯಾಟರ್ಗಳು ತಂಡದ ಮೊತ್ತವನ್ನು 350 ರನ್‌ಗಳ ಗಡಿ ದಾಟಿಸಿದರು. ಇಂಗ್ಲೆಂಡ್ ವಿರುದ್ಧ ಶತಕ ಗಳಿಸಿದ್ದ ಕ್ಲಾಸೆನ್ 10 ರನ್ನಿಂದ ಶತಕ ಸಾಧನೆ ಮಾಡುವಲ್ಲಿ ವಿಫಲರಾದರು. 49 ಬಾಲ್ ಆಡಿದ ಅವರು 2 ಬೌಂಡರಿ, 8 ಸಿಕ್ಸ್ನಿಂದ 90 ರನ್ ಕಲೆಹಾಕಿ 49.2 ನೇ ಓವರ್ನಲ್ಲಿ ಶತಕ ಗಳಿಸುವ ಪ್ರಯತ್ನದಲ್ಲಿ ವಿಕೆಟ್ ಕೊಟ್ಟರು. ಕ್ಲಾಸೆನ್ ಜತೆ ಇನ್ನಿಂಗ್ಸ್ ಕಟ್ಟಿದ್ದ ಡೇವಿಡ್ ಮಿಲ್ಲರ್ 34 ರನ್ ಗಳಿಸಿದರು.
ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಿಯಂತ್ರಣ ಸಾಧಿಸಿದರು. ಆದರೆ ನಂತರ ಹರಿಣಗಳು ಬಾಂಗ್ಲಾ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. 7 ಬೌಲರ್ಗಳು ಎಷ್ಟೇ ಪ್ರಯತ್ನಿಸಿದರೂ ರನ್ ಗತಿ ಕಡಿಮೆ ಆಗಲೇ ಇಲ್ಲ. ಮೆಹಿದಿ ಹಸನ್ ಮಿರಾಜ್ 4.90 ಎಕಾನಮಿಯಲ್ಲಿ ಬೌಲ್ ಮಾಡಿದ್ದು ಬಿಟ್ಟರೆ, ಮಿಕ್ಕ 6 ಜನ 6+ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಹಸನ್ ಮಹಮ್ಮದ್ 2, ಶಕೀಬ್ ಅಲ್ ಹಸನ್, ಮೆಹಿದಿ ಹಸನ್ ಮಿರಾಜ್ ಮತ್ತು ಶೋರಿಫುಲ್ ಇಸ್ಲಾಂ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:'8 ಕೆ.ಜಿ ಮಟನ್ ತಿಂದರೆ ಎಲ್ಲಿರುತ್ತೆ ಫಿಟ್ನೆಸ್?': ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಪಾಕಿಸ್ತಾನ ತಂಡದ ವಿರುದ್ಧ ವಾಸಿಂ ಅಕ್ರಮ್ ವಾಗ್ದಾಳಿ