ಅಹಮದಾಬಾದ್ (ಗುಜರಾತ್): ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನ ವೇಳಾಪಟ್ಟಿಯನ್ನು ಲಂಡನ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಪ್ರಕಟಿಸಬಹುದು. ಶನಿವಾರ ನಡೆದ ಮಂಡಳಿಯ ವಿಶೇಷ ಸಾಮಾನ್ಯ ಸಭೆ (ಎಸ್‌ಜಿಎಂ) ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಈ ಮಾಹಿತಿ ನೀಡಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯದ ಸ್ಥಳಗಳನ್ನು ಘೋಷಿಸಲಾಗುವುದು ಎಂದು ಶಾ ಹೇಳಿದರು. ಪಂದ್ಯಾವಳಿಯ ಸಂಪೂರ್ಣ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಟೆಸ್ಟ್ ಆಡುವ ದೇಶಗಳು ಮತ್ತು ಅಸೋಸಿಯೇಟ್ ರಾಷ್ಟ್ರಗಳ ಸದಸ್ಯರ ನಡುವಿನ ಸಭೆಯ ನಂತರ ಏಷ್ಯಾ ಕಪ್ 2023ರ ಭವಿಷ್ಯವನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು. ಅಭಿಮಾನಿಗಳಿಗೆ ಸೂಕ್ತ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು 15 ಕ್ರೀಡಾಂಗಣಗಳನ್ನು ಆಯ್ಕೆ ಮಾಡಲಾಗಿದ್ದು, ಇನ್ನೂ ಕೆಲವು ಕ್ರೀಡಾಂಗಣಗಳನ್ನು ನಂತರ ಸೇರಿಸಲಾಗುವುದು ಎಂದು ತಿಳಿಸಿದರು.
46 ದಿನಗಳ ಅವಧಿಯಲ್ಲಿ ಮೂರು ನಾಕೌಟ್ ಪಂದ್ಯಗಳು ಸೇರಿದಂತೆ 48 ಪಂದ್ಯಗಳನ್ನು ಸ್ಪರ್ಧಿಸಲು ನಿರ್ಧರಿಸಲಾಗಿದೆ. ಅಹಮದಾಬಾದ್ ಹೊರತುಪಡಿಸಿ, ಬಿಸಿಸಿಐ ಶಾರ್ಟ್‌ಲಿಸ್ಟ್‌ನಲ್ಲಿ ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಕ್ನೋ, ಇಂದೋರ್, ರಾಜ್‌ಕೋಟ್, ಮುಂಬೈ ಮತ್ತು ತಿರುವನಂತಪುರ ಸೇರಿವೆ. ನಾಗ್ಪುರ ಮತ್ತು ಪುಣೆಯನ್ನೂ ಪರಿಗಣಿಸಲಾಗುತ್ತಿದೆ. ಲೀಗ್ ಪಂದ್ಯಗಳು 10 ನಗರಗಳಲ್ಲಿ ನಡೆಯುವ ಸಾಧ್ಯತೆಯಿದೆ. ಮುಖ್ಯ ಪಂದ್ಯಕ್ಕೂ ಮುನ್ನ ಇನ್ನೂ ಎರಡು ನಗರಗಳು ಅಭ್ಯಾಸ ಪಂದ್ಯಗಳನ್ನು ಆಯೋಜಿಸುತ್ತವೆ ಎಂದಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಸ್ತುತ ಅಧ್ಯಕ್ಷರೂ ಆಗಿರುವ ಶಾ, 2023ರ ಏಷ್ಯಾಕಪ್‌ಗಾಗಿ ಪಿಸಿಬಿಯ ಹೈಬ್ರಿಡ್ ಸ್ವರೂಪವು ಸಾಧ್ಯವೇ ಎಂಬುದನ್ನು ನಿರ್ಧರಿಸಲು ತುರ್ತು ಎಸಿಸಿ ಸಭೆಯನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ. ಭಾನುವಾರ ಅವರು ಶ್ರೀಲಂಕಾ ಕ್ರಿಕೆಟ್, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಹವರ್ತಿಗಳೊಂದಿಗೆ ಏಷ್ಯಾಕಪ್ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಲಿದ್ದಾರೆ.