ಅಹಮದಾಬಾದ್ (ಗುಜರಾತ್): ಟೀಮ್ ಇಂಡಿಯಾದ ನಾಯಕ ಹಿಮ್ಮ್ಯಾನ್ ಎಂದೇ ಕರೆಸಿಕೊಳ್ಳುವ ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧ ತಮ್ಮ ಇನ್ನಿಂಗ್ಸ್ ಸ್ಥಿರತೆಯನ್ನು ಮುಂದುವರೆಸಿದ್ದಾರೆ. ಸಾಮಾನ್ಯವಾಗಿ ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿಯ ದಾಖಲೆಗಳನ್ನು ನಾವು ಲೆಕ್ಕ ಹಾಕುತ್ತೇವೆ. ಆದರೆ ರೋಹಿತ್ ಪಾಕ್ ವಿರುದ್ಧ ಕಳೆದ ಎಂಟು ಇನ್ನಿಂಗ್ಸ್ನಲ್ಲಿ ಆರರಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.
ರೋಹಿತ್ ಶರ್ಮಾ ಪಾಕಿಸ್ತಾನದ ವಿರುದ್ಧದ ಕಳೆದ ಎಂಟು ಇನ್ನಿಂಗ್ಸ್ನಲ್ಲಿ 91, 0, 52, 111*, 140, 11, 56, ಮತ್ತು ಇಂದು 86 ರನ್ನ ಇನ್ನಿಂಗ್ಸ್ ಆಡಿದರು. ಇದರಲ್ಲಿ ಕೇವಲ ಎರಡು ಇನ್ನಿಗ್ಸ್ನಲ್ಲಿ ಮಾತ್ರ ಶರ್ಮಾ ವಿಫಲರಾಗಿದ್ದಾರೆ. ಉಳಿದಂತೆ 4 ಅರ್ಧಶತಕ ಮತ್ತು 2 ಶತಕಗಳು ಇನ್ನಿಂಗ್ಸ್ ಆಡಿದ್ದಾರೆ. ವಿಶ್ವಕಪ್ನಲ್ಲಿ 7 ಶತಕದ ದಾಖಲೆ ಮಾಡಿದ ರೋಹಿತ್ ಇಂದು 14 ರನ್ನಿಂದ ಮತ್ತೊಂದು 100 ಮಿಸ್ ಮಾಡಿಕೊಂಡರು.
ಏಕದಿನದಲ್ಲಿ 300 ಸಿಕ್ಸ್:ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಮಾದರಿಯಲ್ಲಿ 300 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ಹ್ಯಾರಿಸ್ ರೌಫ್ ಅವರನ್ನು ಸಿಕ್ಸರ್‌ಗೆ ಹೊಡೆದ ನಂತರ ರೋಹಿತ್ ಈ ಮೈಲಿಗಲ್ಲು ಸಾಧಿಸಿದರು. ರೋಹಿತ್ ಏಕದಿನ ಮಾದರಿಯಲ್ಲಿ ಕೇವಲ 254 ಪಂದ್ಯಗಳಲ್ಲಿ ಈ ದಾಖಲೆ ಮಾಡಿದ್ದಾರೆ. 308 ಪಂದ್ಯಗಳಲ್ಲಿ 351 ಸಿಕ್ಸರ್‌ಗಳೊಂದಿಗೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇನ್ನೂ ಅಗ್ರಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ 301 ಇನ್ನಿಂಗ್ಸ್ನಲ್ಲಿ 331 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ.