ಹೈದರಾಬಾದ್ (ತೆಲಂಗಾಣ): ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಶತಕದಾಟದ ಫಲವಾಗಿ ಪಾಕಿಸ್ತಾನ ತಂಡವು ಶ್ರೀಲಂಕಾ ವಿರುದ್ಧ ಗೆದ್ದು ಬೀಗಿತು. ಈ ಮೂಲಕ ಪಾಕಿಸ್ತಾನ ಎರಡು ಗೆಲುವು ಸಾಧಿಸಿದ್ದು ಮುಂದಿನ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಸಿಂಹಳೀಯರು ಕುಸಲ್ ಮೆಂಡೀಸ್ ಮತ್ತು ಸದೀರ ಸಮರವಿಕ್ರಮ ಅವರ ಶತಕದ ನೆರವಿನಿಂದ 345 ರನ್‌ಗಳ ಬೃಹತ್ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಪಾಕ್ಗೆ ಲಂಕಾ ಬೌಲರ್ಗಳು ಆಘಾತ ನೀಡಿದರು. ತಂಡ 16 ರನ್ ಗಳಿಸಿದ್ದಾಗ ಇಮಾಮ್-ಉಲ್-ಹಕ್ (12) ವಿಕೆಟ್ ಬಿದ್ದರೆ, 37 ಗಳಿಸಿದ್ದಾಗ ನಾಯಕ ಬಾಬರ್ ಅಜಮ್ (10) ಔಟಾಗಿ ಪೆವಿಲಿಯನ್ಗೆ ಮರಳಿದ್ದರು. ದಿಲ್ಶನ್ ಮಧುಶಂಕ ಈ ಇಬ್ಬರು ಬ್ಯಾಟರ್ಗಳ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಆದರೆ ಪಾಕಿಸ್ತಾನದ ಮೂರನೇ ವಿಕೆಟ್ ಬಲಿಷ್ಠವಾಗಿ ನಿಂತಿದ್ದರಿಂದ ಲಂಕಾ ಆಟ ನಡೆಯಲಿಲ್ಲ. ಲಂಕನ್ನರ ಬೌಲಿಂಗ್ಗೆ ಆರಂಭದಲ್ಲಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದ ಅಬ್ದುಲ್ಲಾ ಶಫೀಕ್ ಮತ್ತು ಮೊಹಮ್ಮದ್ ರಿಜ್ವಾನ್ ಪಿಚ್ ಅರಿತುಕೊಂಡರು. ವಿಕೆಟ್ಗೆ ಸೆಟ್ ಆದ ನಂತರ ಈ ಜೋಡಿ 176 ರನ್‌ಗಳ ಬೃಹತ್ ಜೊತೆಯಾಟವಾಡಿದರು. ಇವರ ಪಾಲುದಾರಿಕೆಯನ್ನು ನಿಯಂತ್ರಿಸಲು ಲಂಕಾಕ್ಕೆ ಸಾಧ್ಯವಾಗಲಿಲ್ಲ. ಸಿಂಹಳೀಯ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಇಬ್ಬರು ಬ್ಯಾಟರ್ಗಳು ತಂಡಕ್ಕೆ ಗೆಲುವಿನ ಗಿಫ್ಟ್ ಕೊಟ್ಟರು.