ಹೈದರಾಬಾದ್ (ತೆಲಂಗಾಣ):ಕುಸಲ್ ಮೆಂಡಿಸ್, ಸದೀರ ಸಮರವಿಕ್ರಮ ಅವರ ಶತಕದಾಟ ಮತ್ತು ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ ನೆರವಿನಿಂದ ಏಷ್ಯಾಕಪ್ ರನ್ನರ್‌ಅಪ್ ಶ್ರೀಲಂಕಾ 344 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ದಕ್ಷಿಣ ಆಫ್ರಿಕಾ ವಿರುದ್ಧ ಹೋರಾಡಿ ಮಣಿದಿದ್ದ ಲಂಕಾ ಇಂದು ಶತಾಯಗತಾಯ ಗೆಲ್ಲಲೇ ಬೇಕೆಂಬ ನಿರ್ಧಾರಕ್ಕೆ ಬಂದಂತಿದೆ. ನೆದರ್ಲೆಂಡ್ ಮಣಿಸಿ ಉತ್ಸಾಹದಲ್ಲಿರುವ ಪಾಕಿಸ್ತಾನ ವಿಶ್ವಕಪ್ ಲೀಗ್ನಲ್ಲಿ ಎರಡನೇ ಗೆಲುವು ದಾಖಲಿಸಲು 345 ರನ್ ಗಳಿಸಬೇಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಂಕಾ ಪಾಕಿಸ್ತಾನದ ಬೌಲರ್ಗಳನ್ನು ಚೆಂಡಾಡಿದರು. ಎರಡನೇ ಓವರ್ನಲ್ಲಿ ಹಸನ್ ಅಲಿ ಕುಸಾಲ್ ಪೆರೇರಾ (0) ಅವರ ವಿಕೆಟ್ ಉರುಳಿಸಿ ಲಂಕಾಗೆ ಶಾಕ್ ನೀಡಿದರು. ಆದರೆ, ಲಂಕಾ ಈ ಶಾಕ್‌ನಿಂದ ಬಲುಬೇಗ ಹೊರಬಂತು. ಎರಡನೇ ವಿಕೆಟ್ಗೆ ಪಾತುಮ್ ನಿಸ್ಸಾಂಕ ಮತ್ತು ಕುಸಲ್ ಮೆಂಡಿಸ್ ಶತಕದ ಜೊತೆಯಾಟವಾಡಿದರು. ಅರ್ಧಶತಕ ಗಳಿಸಿದ ನಿಸ್ಸಾಂಕ (51) ವಿಕೆಟ್ ಕೊಟ್ಟು ಪೆವಿಲಿಯನ್ಗೆ ಮರಳಿದರೆ, ನಂತರ ಬಂದ ಸದೀರ ಸಮರವಿಕ್ರಮ ಪಿಚ್ಗೆ ಹೊಂದಿಕೊಂಡಿದ್ದ ಮೆಂಡಿಸ್ 111 ರನ್‌ಗಳ ಪಾಲುದಾರಿಕೆ ಮಾಡಿದರು. ಕುಸಲ್ ಮೆಂಡಿಸ್ ಏಕದಿನ ಕ್ರಿಕೆಟ್ನ ತಮ್ಮ 3ನೇ ಶತಕ ದಾಖಲಿಸಿದರು. 77 ಬಾಲ್ನಲ್ಲಿ 14 ಬೌಂಡರಿ ಮತ್ತು 6 ಸಿಕ್ಸ್ನಿಂದ 122 ರನ್ ಗಳಿಸಿ ವಿಕೆಟ್ ಕೊಟ್ಟರು.