ಕರ್ನಾಟಕ

karnataka

ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋಲು​; ಅಗ್ರಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ

ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ಇಂದು ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದಕ್ಷಿಣ ಆಫ್ರಿಕಾ 1 ವಿಕೆಟ್‌ನಿಂದ ಅಮೋಘ ಜಯ ದಾಖಲಿಸಿತು.

By ETV Bharat Karnataka Team

Published : Oct 27, 2023, 10:46 PM IST

Published : Oct 27, 2023, 10:46 PM IST

Updated : Oct 27, 2023, 11:03 PM IST

ವಿಶ್ವಕಪ್​ ಕ್ರಿಕೆಟ್
ವಿಶ್ವಕಪ್​ ಕ್ರಿಕೆಟ್

ಚೆನ್ನೈ (ತಮಿಳುನಾಡು):ಐಡೆನ್ ಮಾರ್ಕ್ರಾಮ್ ಅವರ ಸಮಯೋಚಿತ ಅರ್ಧಶತಕ ಹಾಗೂ ಕೊನೆಯ ಹಂತದಲ್ಲಿ 10ನೇ ವಿಕೆಟ್​ಗೆ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಅವರ ಬ್ಯಾಟಿಂಗ್‌ ಸಹಾಯದಿಂದ ಅತಿ ರೋಚಕವಾಗಿ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ನೀಡಿದ್ದ 271 ರನ್​ಗಳ ಗುರಿಯನ್ನು 16 ಎಸೆತಗಳನ್ನು ಉಳಿಸಿಕೊಂಡು 1 ವಿಕೆಟ್​ನಿಂದ ಗೆದ್ದುಕೊಂಡಿತು.

ಚೆನ್ನೈನ ಚೆಪಾಕ್​ ಕ್ರೀಡಾಂಗಣ ಈ ವಿಶ್ವಕಪ್​ನ ಮೊದಲ ರೋಚಕ ಪಂದ್ಯ ಒಂದಕ್ಕೆ ಸಾಕ್ಷಿಯಾಯಿತು. ಗೆಲುವಿಗೆ 21 ರನ್​ ಬೇಕಿದ್ದಾಗ 91 ರನ್‌​ ಗಳಿಸಿ ಆಡುತ್ತಿದ್ದ ಐಡೆನ್ ಮಾರ್ಕ್ರಾಮ್ ವಿಕೆಟ್​ ಉರುಳಿದ್ದು ದಕ್ಷಿಣ ಆಫ್ರಿಕಾ ತಂಡದ ಮೇಲೆ ಒತ್ತಡ ಹೆಚ್ಚಾಯಿತು. ನಂತರ ಬಾಲಂಗೋಚಿಗಳು ಪಂದ್ಯ ಗೆಲ್ಲಿಸುವರಾ ಎಂಬ ಪ್ರಶ್ನೆ ಎದುರಾಯಿತು. ಜೆರಾಲ್ಡ್ ಕೊಯೆಟ್ಜಿ ಮತ್ತು ಲುಂಗಿ ಎನ್​ಗಿಡಿಯೂ ಪಂದ್ಯ ಗೆಲ್ಲಿಸುವಲ್ಲಿ ಕೊಡುಗೆ ನೀಡಲಿಲ್ಲ. ಕೊನೆಯಲ್ಲಿ ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ 11 ರನ್​ ಗಳಿಸಿ ತಂಡವನ್ನು 16 ಬಾಲ್​ ಉಳಿಸಿಕೊಂಡು ಗೆಲ್ಲಿಸಿಕೊಟ್ಟರು. ಪಾಕಿಸ್ತಾನ ಹರಿಣಗಳ ಒಂದು ವಿಕೆಟ್​ ಪಡೆಯುವಲ್ಲಿ ವಿಫಲವಾಗಿ ಸತತ ನಾಲ್ಕನೇ ಸೋಲು ಕಂಡಿತು.

ಪಾಕಿಸ್ತಾನ ಸುಧಾರಿತ ಬ್ಯಾಟಿಂಗ್​, ಬೌಲಿಂಗ್ ಫೀಲ್ಡಿಂಗ್​ ಪ್ರದರ್ಶನ ನೀಡಿದರೂ ಗೆಲುವು ದೂರದ ಮಾತಾಯಿತು. ಚೇಸಿಂಗ್​ ಮಾಡುವಾಗ ಒತ್ತಡದಲ್ಲಿ ಬ್ಯಾಟಿಂಗ್​ ಮಾಡಲಾಗದೇ ಹರಿಣಗಳ ತಂಡ ಸೋಲು ಕಂಡಿತ್ತು. ಇದೇ ಲೆಕ್ಕಾಚಾರದಲ್ಲಿ ಪಾಕ್​ ಮೊದಲು ಬ್ಯಾಟಿಂಗ್​ಗೆ ಇಳಿಯಿತು. ಬಾಬರ್ ಅಜಮ್ ಮತ್ತು ಸೌದ್ ಶಕೀಲ್ ಅರ್ಧಶತಕದ ಕೊಡುಗೆಯಿಂದ 270 ರನ್​ ಗಳಿಸಿತಾದರೂ ಕೊನೆಯ ಬ್ಯಾಟರ್​​ಗಳು ಬೇಗ ವಿಕೆಟ್​ ಒಪ್ಪಿಸಿದ ಕಾರಣ 46.3 ಆಲ್​ಔಟ್ ಆಯಿತು.

ಸ್ಫರ್ಧಾತ್ಮಕ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ರನ್​ ಒತ್ತಡದಲ್ಲಿ ಬ್ಯಾಟಿಂಗ್ ಮಾಡಲು ಹೆಣಗಾಡುತ್ತದೆ ಎಂಬುದನ್ನು ಮತ್ತೆ ಸಾಬೀತುಮಾಡಿತು. ಪಾಕ್​ನ ಮೊಹಮ್ಮದ್ ವಾಸಿಮ್ ಜೂನಿಯರ್ ಹರಿಣಗಳ ಆರಂಭಿಕರನ್ನು ಕಾಡಿದರು. ವಿಶ್ವಕಪ್​ನಲ್ಲಿ ಮೂರು ಶತಕ ಮಾಡಿದ ಕ್ವಿಂಟನ್ ಡಿ ಕಾಕ್ 24 ರನ್​ಗೆ ಜೂನಿಯರ್​ಗೆ ವಿಕೆಟ್​ ಕೊಟ್ಟರು. ಅವರ ಬೆನ್ನಲ್ಲೇ ವಿಶ್ವಕಪ್​ನಲ್ಲಿ ಸತತ ವಿಫಲ ಕಾಣುತ್ತಿರುವ ತೆಂಬಾ ಬವುಮಾ ಸಹ (28) ಔಟ್​ ಆದರು.

ಮಾರ್ಕ್ರಾಮ್ ಏಕಾಂಗಿ ಆಟ: ಮೂರನೇ ವಿಕೆಟ್​ಗೆ ಒಂದಾದ ಐಡೆನ್ ಮಾರ್ಕ್ರಾಮ್ ಮತ್ತು ಐಡೆನ್ ಮಾರ್ಕ್ರಾಮ್ 54 ರನ್​ ಜತೆಯಾಟ ಮಾಡಿದರು. ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಇದು ಚೇತರಿಕೆ ನೀಡಿತು. ಆದರೆ ಡಸ್ಸೆನ್ (21) ವಿಕೆಟ್​ ನಂತರ ಮಾರ್ಕ್ರಾಮ್ ಜತೆ ಯಾರು ಪಾಲುದಾರಿಕೆ ಹಂಚಿಕೊಳ್ಳಲಿಲ್ಲ. ಹೆನ್ರಿಚ್ ಕ್ಲಾಸೆನ್ (12), ಡೇವಿಡ್ ಮಿಲ್ಲರ್ (29), ಮಾರ್ಕೊ ಜಾನ್ಸೆನ್ (20) ಬೇಗ ವಿಕೆಟ್​ ಕೊಟ್ಟರು. ಪಾಕಿಸ್ತಾನದ ವೇಗಿಗಳು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳ ವಿಕೆಟ್​ ಪಡೆಯುವಲ್ಲಿ ಯಶಸ್ವಿ ಆದರು.

ತಬ್ರೈಜ್ ಶಮ್ಸಿ ಪಂದ್ಯ ಶ್ರೇಷ್ಠ: ಪಾಕಿಸ್ತಾನ ಪರ ಶಾಹೀನ್ ಅಫ್ರಿದಿ 3, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರೌಫ್ ಮತ್ತು ಉಸಮಾ ಮಿರ್​ ತಲಾ ಎರಡು ವಿಕೆಟ್​ ಪಡೆದರು. ಬೌಲಿಂಗ್​ನಲ್ಲಿ 4 ವಿಕೆಟ್​ ಮತ್ತು ಕೊನೆ ಕ್ಷಣದಲ್ಲಿ ವಿಕೆಟ್​ ಕಾಯ್ದ ತಬ್ರೈಜ್ ಶಮ್ಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇದನ್ನೂ ಓದಿ:ಪ್ಯಾರಾ ಏಷ್ಯನ್​ ಗೇಮ್ಸ್​​, 6ನೇ ದಿನ: 99 ಪದಕ ಗೆದ್ದು ದಾಖಲೆ ಬರೆದ ಭಾರತ; ನಾಳೆ ಕ್ರೀಡಾಕೂಟಕ್ಕೆ​ ತೆರೆ

Last Updated : Oct 27, 2023, 11:03 PM IST

ABOUT THE AUTHOR

...view details