ಹೈದರಾಬಾದ್ (ತೆಲಂಗಾಣ):ಏಕದಿನವಿಶ್ವಕಪ್ ಕ್ರಿಕೆಟ್ ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನವು ನೆದರ್ಲೆಂಡ್ ವಿರುದ್ಧ 81 ರನ್‌ಗಳ ಅಂತರದ ಗೆಲುವು ದಾಖಲಿಸಿತು. ನೆದರ್ಲೆಂಡ್ ಪರ ವಿಕ್ರಮಜಿತ್ ಸಿಂಗ್ ಮತ್ತು ಬಾಸ್ ಡಿ ಲೀಡೆ ಅವರ ಅರ್ಧಶತಕದಾಟ ಫಲ ನೀಡಲಿಲ್ಲ. ಹೀಗಿದ್ದರೂ ಬಲಿಷ್ಠ ಪಾಕಿಸ್ತಾನದ ವಿರುದ್ಧ ಡಚ್ಚರು ಪ್ರಬಲ ಪೈಪೋಟಿ ನೀಡಿದರು. 41 ಓವರ್ ಆಡಿದ ನೆದರ್ಲೆಂಡ್ 205 ರನ್ಗಳಿಗೆ ಸರ್ವಪತನ ಕಂಡು ಸೋಲೊಪ್ಪಿಕೊಂಡಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ನೆದರ್ಲೆಂಡ್ಗೆ 287 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡುವಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು. ಈ ಗುರಿ ಬೆನ್ನತ್ತಲು ಅಣಿಯಾಗುತ್ತಿದ್ದ ಡಚ್ಚರಿಗೆ ಹಸನ್ ಅಲಿ ಆರಂಭಿಕ ವಿಕೆಟ್ ಕಿತ್ತು ಒತ್ತಡ ಹೆಚ್ಚಿಸಿದರು. ಮ್ಯಾಕ್ಸ್ ಓಡೌಡ್ 5 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ರೀಸಿಗೆ ಬಂದ ಕಾಲಿನ್ ಅಕರ್ಮನ್ ಇನ್ನೋರ್ವ ಆರಂಭಿಕ ವಿಕ್ರಮಜಿತ್ ಸಿಂಗ್ ಜೊತೆ ಸೇರಿ ಮೊದಲ ಪವರ್‌ಪ್ಲೇಯಲ್ಲಿ ಸಾಥ್ ನೀಡಿದರು. ಪಾಕ್ ವೇಗಿಗಳಿಗೆ ಜಾಗ್ರತೆಯಿಂದ ಬ್ಯಾಟಿಂಗ್ ಬೀಸುತ್ತಿದ್ದ ಕಾಲಿನ್ ಅಕರ್ಮನ್ ಸ್ಪಿನ್ನರ್ ಇಫ್ತಿಕರ್ ಅಹ್ಮದ್ಗೆ ವಿಕೆಟ್ ಕೊಟ್ಟರು.
ಎರಡು ವಿಕೆಟ್ಗಳ ಪತನದ ನಂತರ ಬೌಲಿಂಗ್ನಲ್ಲಿ ನಾಲ್ಕು ವಿಕೆಟ್ ಪಡೆದು ಕಮಾಲ್ ಮಾಡಿದ್ದ ಬಾಸ್ ಡಿ ಲೀಡೆ ಆರಂಭಿಕ ವಿಕ್ರಮಜಿತ್ ಅವರನ್ನು ಸೇರಿಕೊಂಡರು. ಈ ಜೋಡಿ 70 ರನ್ ಪಾಲುದಾರಿಕೆ ಮಾಡಿ ಪಾಕಿಸ್ತಾನಕ್ಕೆ ಬೆದರಿಕೆಯೊಡ್ಡಿತು. ವಿಶ್ವಕಪ್ ಮೊದಲ ಪಂದ್ಯದ ರೀತಿಯಲ್ಲಿ ಈ ಜೋಡಿ ಕೆಲ ಸಮಯ ಕ್ರೀಸ್ನಲ್ಲಿ ನಿಂತಿದ್ದರೆ, ಪಾಕಿಸ್ತಾನದ ಗೆಲುವಿನ ಮಾತು ದೂರದ್ದಾಗಿರುತ್ತಿತ್ತು. ಆದರೆ, ಶಾಬಾದ್ ಖಾನ್ ಪಾಕಿಸ್ತಾನಕ್ಕೆ ಅಗತ್ಯ ಸಮಯದಲ್ಲಿ ವಿಕೆಟ್ ಪಡೆದು ಆಸರೆಯಾದರು. 67 ಬಾಲ್ನಲ್ಲಿ 4 ಬೌಂಡರಿ ಮತ್ತು 1 ಸಿಕ್ಸ್ನಿಂದ 52 ರನ್ ಗಳಿಸಿ ಆಡುತ್ತಿದ್ದ ವಿಕ್ರಮಜಿತ್ ಸಿಂಗ್ ಕ್ಯಾಚಿತ್ತು ಹೊರನಡೆದರು.