ಕೋಲ್ಕತ್ತಾ (ಪಶ್ಚಿಮ ಬಂಗಾಳ): ಸತತ ನಾಲ್ಕು ಸೋಲುಗಳನ್ನು ಕಂಡ ನಂತರ ಪಾಕಿಸ್ತಾನ ಬೌಲಿಂಗ್ನಲ್ಲಿ ಸುಧಾರಿಸಿದೆ. ಬಾಂಗ್ಲಾದೇಶದ ವಿರುದ್ಧ ಇಲ್ಲಿನ ಈಡನ್ಗಾರ್ಡನ್ ಮೈದಾನದಲ್ಲಿ ಪಾಕ್ ಬೌಲರ್ಗಳು ಕಳೆದ 6 ಪಂದ್ಯಕ್ಕಿಂತ ಇಂದು ಉತ್ತಮ ಬೌಲಿಂಗ್ ಪ್ರದರ್ಶಿಸಿದರು. ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ 3 ವಿಕೆಟ್ ಕಬಳಿಸಿ ಮಿಂಚಿದರು. ಇದರಿಂದ ಬಾಂಗ್ಲಾದೇಶ 45.1 ಓವರ್ಗೆ 204 ರನ್ ಗಳಿಸಿ ಆಲ್ಔಟ್ ಆಯಿತು. ಈ ಮ್ಯಾಚ್ ಸೇರಿದಂತೆ ಪಾಕ್ ಮುಂದಿನ ಎರಡು ಪಂದ್ಯಗಳನ್ನು ಗೆದ್ದಲ್ಲಿ ಸೆಮೀಸ್ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.
ಅಫ್ಘಾನಿಸ್ತಾನದ ವಿರುದ್ಧ ಒಂದು ಗೆಲುವು ದಾಖಲಿಸಿದ ನಂತರ ಸತತ ಐದು ಸೋಲು ಕಂಡಿರುವ ಶಕೀಬ್ ಅಲ್ ಹಸನ್ ಪಡೆ ಇಂದಿನ ಪಂದ್ಯದ ಜತೆಗೆ ಉಳಿದ ಪಂದ್ಯಗಳನ್ನು ಕಳೆದುಕೊಂಡಲ್ಲಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾ ಟೈಗರ್ಸ್ಗೆ ಶಾಹೀನ್ ಅಫ್ರಿದಿ ಬೆನ್ನು ಬೆನ್ನು ಶಾಕ್ ನೀಡಿದರು. ಮೊದಲ ಓವರ್ನಲ್ಲಿ ತಂಝಿದ್ ಹಸನ್ ವಿಕೆಟ್ ಕಬಳಿಸಿದರೆ, 3ನೇ ಓವರ್ನಲ್ಲಿ ನಜ್ಮುಲ್ ಹೊಸೈನ್ ಶಾಂಟೊ (4) ಅವರ ವಿಕೆಟ್ ಪಡೆದರು. ಅಫ್ರಿದಿ ಬೆನ್ನಲ್ಲೇ ಹ್ಯಾರಿಸ್ ರೌಫ್ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್ (5) ಅವರ ವಿಕೆಟ್ ಪಡೆದುಕೊಂಡರು.
4ನೇ ವಿಕೆಟ್ಗೆ ಇನ್ನೋರ್ವ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಜೊತೆಗೆ ಬಡ್ತಿ ಪಡೆದು ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಮಹಮ್ಮದುಲ್ಲಾ 79 ರನ್ನ ಜತೆಯಾಟವನ್ನು ಮಾಡಿದರು. ಇದರಿಂದ 23 ರನ್ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾ 100ರ ಗಡಿ ದಾಟಿತು. 45 ರನ್ ಗಳಿಸಿ ಆಡುತ್ತಿದ್ದ ಲಿಟ್ಟನ್ ದಾಸ್ ಇಫ್ತಿಕರ್ ಅಹಮದ್ ದಾಳಿಗೆ ಬಲಿಯಾದರು. ಅವರ ಬೆನ್ನಲ್ಲೇ ಅರ್ಧಶತಕ ಗಳಸಿ ಮಹಮ್ಮದುಲ್ಲಾ ಅವರು ಸಹ ವಿಕೆಟ್ ಕಳೆದುಕೊಂಡರು. ಇನ್ನಿಂಗ್ಸ್ನಲ್ಲಿ ಮಹಮ್ಮದುಲ್ಲಾ 70 ಬಾಲ್ನಲ್ಲಿ 6 ಬೌಂಡರಿ, 1 ಸಿಕ್ಸ್ನಿಂದ 56 ರನ್ ಕಲೆಹಾಕಿದರು.
ಮಧ್ಯಮ ಕ್ರಮಾಂಕದಲ್ಲಿ ತೌಹಿದ್ ಹೃದಯಾಯ್ ನಾಯಕನಿಗೆ ಸಾಥ್ ನೀಡಲಿಲ್ಲ. ನಾಯಕ ಶಕೀಬ್ ಅಲ್ ಹಸನ್ ಜತೆಗೆ ಕೆಳಕ್ರಮಾಂಕದಲ್ಲಿ ಮೆಹಿದಿ ಹಸನ್ ಮಿರಾಜ್ ಪಾಲುದಾರಿಕೆ ಹಂಚಿಕೊಂಡರು. ಈ ಜೋಡಿ 7ನೇ ವಿಕೆಟ್ 45 ರನ್ನ ಪುಟ್ಟ ಜತೆಯಾಟವನ್ನು ಮಾಡಿತು. ಶಕೀಬ್ 43 ರನ್ಗೆ ವಿಕೆಟ್ ಒಪ್ಪಿಸಿದರೆ, ಮೆಹಿದಿ ಹಸನ್ ಮಿರಾಜ್ 25 ಗಳಿಸಿ ತಂಡದ ಮೊತ್ತವನ್ನು 200ರ ಗಡಿ ತಲುಪಿಸಿದರು. ಕೊನೆಯಲ್ಲಿ ಮೊಹಮ್ಮದ್ ವಾಸಿಂ ಜೂನಿಯರ್ ಅವರ ದಾಳಿಗೆ ನಲುಗಿದ ಬಾಂಗ್ಲಾ ತಂಡ 204 ರನ್ಗೆ ಸರ್ವಪತನ ಕಂಡಿತು.
ಶತಕ ವಿಕೆಟ್ ವೀರ ಅಫ್ರಿದಿ: ಶಾಹೀನ್ ಶಾ ಅಫ್ರಿದಿ ಏಕದಿನ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ದಾಖಲೆಯನ್ನು ಬರೆದರು. 51 ಪಂದ್ಯದಲ್ಲಿ ಶತಕ ವಿಕೆಟ್ ಪಡೆದು ಆಸಿಸ್ ಆಟಗಾರ ಮಿಚೆಲ್ ಸ್ಟಾರ್ಕ್ (52) ಅವರನ್ನು ಹಿಂದಿಕ್ಕಿದರು. ಪಂದ್ಯದಲ್ಲಿ ಶಾಹೀನ್ ಅಫ್ರಿದಿ ಮತ್ತು ಮೊಹಮ್ಮದ್ ವಾಸಿಂ ಜೂನಿಯರ್ ತಲಾ 3 ವಿಕೆಟ್ ಕಬಳಿಸಿದರೆ, ಹ್ಯಾರಿಸ್ ರೌಫ್ 2 ಹಾಗೇ ಉಸಾಮಾ ಮಿರ್, ಇಫ್ತಿಕರ್ ಅಹಮದ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ:ಸಂಪೂರ್ಣ ಫಿಟ್ ಆಗಿದ್ದಲ್ಲಿ ಮುಂದಿನ ಐಪಿಎಲ್ ಆಡುವೆ, ಇಲ್ಲವೇ ಪ್ರೇಕ್ಷಕರೊಂದಿಗೆ ಪಂದ್ಯ ನೋಡುವೆ: ಧೋನಿ