ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕ್ರಿಕೆಟ್ ವಿಶ್ವಕಪ್ ಟೂರ್ನಿಯ 31ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಈ ಪಂದ್ಯ ಗೆದ್ದು ಪಾಕಿಸ್ತಾನ ತಂಡ ಸೆಮೀಸ್ ಆಸೆಯನ್ನು ಜೀವಂತ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಇಂದು ಉಭಯ ತಂಡಗಳು ಮುಖಾಮುಖಿಯಾಗಿವೆ. ಪಾಕಿಸ್ತಾನ ಇದುವರೆಗೆ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದೆ. ಒಟ್ಟು 6 ಪಂದ್ಯಗಳನ್ನಾಡಿ ನಾಲ್ಕರಲ್ಲಿ ಸೋತಿದೆ. ಎರಡು ಮಾತ್ರ ಗೆದ್ದು ನಾಲ್ಕು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದರೆ ಆರು ಅಂಕಗಳೊಂದಿಗೆ ಅಫ್ಘಾನಿಸ್ತಾನ ತಂಡವನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರುವ ಯೋಚನೆಯಲ್ಲಿ ಪಾಕ್ ತಂಡವಿದೆ. ಇಂದು ಬಾಂಗ್ಲಾ ಪಂದ್ಯದ ಬಳಿಕ ಮುಂದೆ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳನ್ನು ಎದುರಿಸಲಿದೆ.
ಮತ್ತೊಂದೆಡೆ, ಬಾಂಗ್ಲಾದೇಶ ತಂಡದ ಪ್ರದರ್ಶನ ಕೂಡ ವಿಶ್ವಕಪ್ನಲ್ಲಿ ನೀರಸವಾಗಿದೆ. ಇಲ್ಲಿಯವರೆಗೆ ಆರು ಪಂದ್ಯಗಳನ್ನಾಡಿ ಐದರಲ್ಲಿ ಸೋಲು ಕಂಡಿದೆ. ಒಂದು ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಸದ್ಯ 9ನೇ ಸ್ಥಾನದಲ್ಲಿರುವ ಬಾಂಗ್ಲಾ ಈಗಾಗಲೇ ಬಹುಕೇತ ಟೂರ್ನಿಯಿಂದ ಹೊರಬಿದ್ದಿದೆ. ಇಂದು ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಶ್ರೀಲಂಕಾ, ಆಸ್ಟ್ರೇಲಿಯಾ ತಂಡದ ವಿರುದ್ಧ ಔಪಚಾರಿಕವಾಗಿ ಸೆಣಸಲಿದೆ.