ಚೆನ್ನೈ (ತಮಿಳುನಾಡು): ವಿಶ್ವಕಪ್ ಕ್ರಿಕೆಟ್‌ನಲ್ಲಿ ಅಫ್ಘಾನಿಸ್ತಾನ ತಂಡವು ಇಂಗ್ಲೆಂಡ್ ನಂತರ ಇದೀಗ ಪಾಕಿಸ್ತಾನವನ್ನೂ ಮಣಿಸಿದೆ. ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಹಾಗು ರಹಮತ್ ಶಾ ಅವರ ತಲಾ ಅರ್ಧಶತಕದಾಟದ ನೆರವಿನಿಂದ ಅಫ್ಘಾನಿಸ್ತಾನ 6 ಎಸೆತಗಳು ಬಾಕಿ ಇರುವಂತೆಯೇ 8 ವಿಕೆಟ್‌ಗಳಿಂದ ಭರ್ಜರಿ ಜಯಭೇರಿ ಬಾರಿಸಿತು. ಸತತ ಏಳು ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದ ಅಫ್ಘನ್ಗೆ ಇದು ಮೊದಲ ಜಯವಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಅಬ್ದುಲ್ಲಾ ಶಫೀಕ್, ಬಾಬರ್ ಆಜಂ ಅವರ ಅರ್ಧಶತಕ ಮತ್ತು ಸೌದ್ ಶಕೀಲ್, ಇಫ್ತಕರ್ ಅಹ್ಮದ್ 40 ರನ್ ಕೊನೆಯ ಹೋರಾಟದ ನೆರವಿನಿಂದ 282 ರನ್‌ಗಳನ್ನು ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಅಫ್ಘನ್ಗೆ ಉತ್ತಮ ಆರಂಭ ದೊರೆಯಿತು. ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಪಾಕ್ ಆರಂಭಿಕ ಬೌಲರ್ಗಳ ವಿರುದ್ಧ ಸಮರ್ಥ ಆಟವಾಡಿದರು. ಈ ಜೋಡಿ ಮೊದಲ ವಿಕೆಟ್ಗೆ 130 ರನ್‌ಗಳ ಜತೆಯಾಟವಾಡಿತು.
ರಹಮಾನುಲ್ಲಾ ಗುರ್ಬಾಜ್ ಎಂದಿನಂತೆ ತಂಡಕ್ಕೆ ಚುರುಕಾದ ಆರಂಭ ನೀಡಿದರು. ಈ ಜೋಡಿ ಮೊದಲ ಪವರ್ ಪ್ಲೇ ಅಂತ್ಯಕ್ಕೆ 60 ರನ್ ಕಲೆಹಾಕಿತು. ಇದರಿಂದ ರನ್‌ರೇಟ್ ಒತ್ತಡ ಕಳೆದುಕೊಂಡಿತು. ಅಲ್ಲದೇ ಪ್ರತಿ ಬಾಲ್ಗೆ ಒಂದು ರನ್ ಗಳಿಸಿದರೂ ಪಂದ್ಯ ಗೆಲ್ಲಬಹುದು ಎಂಬ ವಿಶ್ವಾಸದಲ್ಲೇ ಮುಂದುವರೆಯಿತು. ಎಚ್ಚರಿಕೆಯಿಂದಲೇ ಬ್ಯಾಟ್ ಬೀಸುತ್ತಿದ್ದ ರಹಮಾನುಲ್ಲಾ ಗುರ್ಬಾಜ್ 53ನೇ ಬಾಲ್ನಲ್ಲಿ ಔಟಾದರು. ಇನ್ನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 65 ರನ್ ಗಳಿಸಿದರು.
ಎರಡನೇ ವಿಕೆಟ್ಗೆ ಒಂದಾದ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ 60 ರನ್ ಪಾಲುದಾರಿಕೆ ಮಾಡಿದರು. ಪಾಕಿಸ್ತಾನದ 6 ಬೌಲರ್ಗಳು ವಿಕೆಟ್ ಕಬಳಿಸಲು ಹರಸಾಹಸಪಟ್ಟರಾದರೂ ಯಾವುದೇ ಫಲ ನೀಡಲಿಲ್ಲ. ಇಂಗ್ಲೆಂಡ್ ವಿರುದ್ಧ ಗೆದ್ದಿದ್ದ ತಂಡ ಅದೇ ಆತ್ಮವಿಶ್ವಾಸದಲ್ಲಿ ಮೈದಾನದಲ್ಲಿ ಆಕರ್ಷಕ ಪ್ರದರ್ಶನ ನೀಡಿತು. ಅರ್ಧಶತಕ ದಾಟಿ ಶತಕದತ್ತ ದಾಪುಗಾಲು ಹಾಕುತ್ತಿದ್ದ 13 ರನ್ನಿಂದ 5ನೇ ಏಕದಿನ ಶತಕ ಗಳಿಸುವ ಅವಕಾಶ ಕೈಚೆಲ್ಲಿದರು. 113 ಬಾಲ್ ಆಡಿ 87 ರನ್ ಗಳಿಸಿದ್ದ ಅವರು ಕೀಪರ್ ಕ್ಯಾಚ್ಗೆ ಬಲಿಯಾದರು.