ಚೆನ್ನೈ (ತಮಿಳುನಾಡು): ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಇಂದು ಬಾಂಗ್ಲಾದೇಶವನ್ನು ನ್ಯೂಜಿಲೆಂಡ್ ತಂಡ 7.1 ಓವರ್‌ಗಳಿರುವಂತೆಯೇ 8 ವಿಕೆಟ್ಗಳಿಂದ ಮಣಿಸಿತು. ವಿಶ್ವಕಪ್ ಲೀಗ್ ಪಂದ್ಯಗಳಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸುವ ಮೂಲಕ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದುಕೊಂಡಿತು.
2019ರಲ್ಲಿ ಉತ್ತಮ ಪ್ರದರ್ಶನ ನೀಡಿಯೂ ರನ್ನರ್ ಅಪ್ಗೆ ತೃಪ್ತಿಪಟ್ಟಿದ್ದ ಕಿವೀಸ್ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದೇ ತೀರುತ್ತೇವೆ ಎಂದು ಪಣತೊಟ್ಟಂತೆ ಕಾಣುತ್ತಿದೆ. ಲೀಗ್ ಹಂತದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಬೃಹತ್ ಅಂತರದಿಂದ ಮಣಿಸಿದರೆ, ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿತು. ಮೂರನೇ ಪಂದ್ಯದಲ್ಲಿ ಇಂದು ಬಾಂಗ್ಲಾ ತಂಡವನ್ನು ಸೋಲಿಸಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾದೇಶ ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಬ್ಯಾಟಿಂಗ್ ನೆರವಿನಿಂದ 246 ರನ್ಗಳ ಗುರಿ ನೀಡಿತು. ಈ ಗುರಿಯನ್ನು ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಕಿವೀಸ್ ಗೆದ್ದುಕೊಂಡಿತು.
ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಪಂದ್ಯದಲ್ಲಿ ಅರ್ಧಶತಕ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದ ರಚಿನ್ ರವೀಂದ್ರ (9) ಅವಸರದ ಹೊಡೆತಕ್ಕೆ ಕೈಹಾಕಿ ವಿಕೆಟ್ ಕಳೆದುಕೊಂಡರು. ರವೀಂದ್ರ ವಿಕೆಟ್ ನಂತರ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡ ಕೇನ್ ವಿಲಿಯಮ್ಸನ್ ಮೈದಾನಕ್ಕಿಳಿದಿದ್ದರು. ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ಕೇನ್ ಕಳೆದೆರಡು ಪಂದ್ಯವನ್ನು ಆಡಿರಲಿಲ್ಲ.