ಲಖನೌ (ಉತ್ತರ ಪ್ರದೇಶ): ಇಲ್ಲಿನ ಎಕಾನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನೆದರ್ಲೆಂಡ್ ಮತ್ತು ಶ್ರೀಲಂಕಾ ನಡುವೆ ಪಂದ್ಯ ನಡೆಯುತ್ತಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಡಚ್ಚರು 263 ಗುರಿಯನ್ನು ನೀಡಿದ್ದಾರೆ. ಸಿಂಹಳೀಯ ತಂಡದ ದಿಲ್ಶನ್ ಮಧುಶಂಕ ಮತ್ತು ಕಸುನ್ ರಜಿತ ಅವರ ಪರಿಣಾಮಕಾರಿ ಬೌಲಿಂಗ್ನಿಂದ 49.4 ಓವರ್ಗೆ 262 ರನ್ಗಳನ್ನು ಗಳಿಸಿ ನೆದರ್ಲೆಂಡ್ ಸರ್ವಪತನ ಕಂಡಿತು.
ಟಾಸ್ ಗೆದ್ದ ನಾಯಕ ಸ್ಕಾಟ್ ಎಡ್ವರ್ಡ್ಸ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ತೆಗೆದುಕೊಂಡರು. ಆದರೆ, ತಂಡ ಸತತ ವಿಕೆಟ್ಗಳನ್ನು ಕಳೆದುಕೊಂಡಿತು. 22ನೇ ಓವರ್ ವೇಳೆಗೆ ತಂಡ 91 ರನ್ಗೆ 6 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಂತರ ಕೆಳಕ್ರಮಾಂಕದಲ್ಲಿ ಬಂದ ಬ್ಯಾಟಿಂಗ್ ನೆರವಿನಿಂದ ತಂಡ ಶ್ರೀಲಂಕಾಕ್ಕೆ ಸ್ಪರ್ಧಾತ್ಮಕ ಗುರಿ ನೀಡಿತು.
ಅಗ್ರ, ಮಧ್ಯಮ ಕ್ರಮಾಂಕದ ಕುಸಿತ:ಕಸುನ್ ರಜಿತ ನೆದರ್ಲೆಂಡ್ ತಂಡಕ್ಕೆ ಮೊದಲ ಮೂರು ವಿಕೆಟ್ ಕಬಳಿಸಿ ಆರಂಭಿಕ ಆಘಾತವನ್ನು ನೀಡಿದರು. ಡಚ್ಚರ ವಿಕ್ರಮಜಿತ್ ಸಿಂಗ್ (4), ಮ್ಯಾಕ್ಸ್ ಓಡೌಡ್ (16), ಕಾಲಿನ್ ಅಕರ್ಮನ್ (29) ಪಿಚ್ಗೆ ಸೆಟ್ ಆಗುವ ಮುನ್ನವೇ ಪೆವಿಲಿಯನ್ಗೆ ತೆರಳಬೇಕಾಯಿತು. ನಂತರ ದಿಲ್ಶನ್ ಮಧುಶಂಕ ಬಾಸ್ ಡಿ ಲೀಡೆ (6) ಮತ್ತು ತೇಜ ನಿಡಮನೂರು (9) ಅವರ ವಿಕೆಟ್ ಪಡೆದರು. ಈ ವೇಳೆಗೆ ನೆದರ್ಲೆಂಡ್ 71ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಮಹೇಶ್ ತೀಕ್ಷ್ಣ ಸ್ಕಾಟ್ ಎಡ್ವರ್ಡ್ಸ್ ವಿಕೆಟ್ ಪಡೆದರು.