ಲಖನೌ (ಉತ್ತರ ಪ್ರದೇಶ): ಬೌಲಿಂಗ್ ಮತ್ತು ಬ್ಯಾಟಿಂಗ್ನಿಂದ ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾವನ್ನು ಮಣಿಸಿದ ಅಫ್ಘಾನಿಸ್ತಾನ ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ವಿರುದ್ಧ ಕ್ಷೇತ್ರರಕ್ಷಣೆಯ ಮಿಂಚಿನ ಸಂಚಲನ ಮೂಡಿಸಿ 4 ಪ್ರಮುಖ ಆಟಗಾರರನ್ನು ರನ್ಔಟ್ ಮಾಡಿ ನಿಯಂತ್ರಣ ಹೇರುವಲ್ಲಿ ಯಶಸ್ವಿ ಆಗಿದೆ. ಅಫ್ಘಾನ್ ಚುರುಕಾದ ಫೀಲ್ಡಿಂಗ್ನಿಂದಾಗಿ ಡಚ್ಚರು 46.3 ಓವರ್ಗೆ 179 ರನ್ ಗಳಿಸಿ ಸರ್ವಪತನ ಕಂಡರು. ಸೆಮೀಸ್ ರೇಸ್ನಲ್ಲಿ ಅಫ್ಘಾನ್ ಮುಂದುವರೆಯಬೇಕಾದಲ್ಲಿ 180 ರನ್ಗಳ ಸುಲಭ ಗುರಿಯನ್ನು ಭೇದಿಸಬೇಕಿದೆ.
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶವನ್ನು ತನ್ನ ಬೌಲಿಂಗ್ನ ಶಕ್ತಿಯಿಂದ ಕಟ್ಟಿಹಾಕಿದ ನೆದರ್ಲೆಂಡ್ಸ್ ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಬ್ಯಾಟಿಂಗ್ನಲ್ಲಿ ಭರ್ಜರಿ ಪ್ರದರ್ಶನ ನೀಡುವಲ್ಲಿ ಎಡವಿತು. ಮುಜೀಬ್ ಉರ್ ರಹಮಾನ್ ಡಚ್ಚರಿಗೆ ಮೊದಲ ಓವರ್ನಲ್ಲೇ ಶಾಕ್ ನೀಡಿದರು. ತಂಡ 3 ರನ್ ಗಳಿಸಿದ್ದಾಗ ವೆಸ್ಲಿ ಬ್ಯಾರೆಸಿ (1) ಎಲ್ಬಿಡ್ಲ್ಯೂಗೆ ಬಲಿಯಾದರು.
ಎರಡನೇ ವಿಕೆಟ್ಗೆ ಅರ್ಧಶತಕದ ಜತೆಯಾಟ:ಎರಡನೇ ವಿಕೆಟ್ಗೆ ಒಂದಾದ ಮ್ಯಾಕ್ಸ್ ಓಡೌಡ್ ಮತ್ತು ಕಾಲಿನ್ ಅರ್ಕಮನ್ 73 ರನ್ ಪಾಲುದಾರಿಕೆ ಮಾಡಿದರು. ಫಸ್ಟ್ ಓವರ್ನಲ್ಲೇ ಮೊದಲ ವಿಕೆಟ್ ಕಳೆದುಕೊಂಡಿದ್ದರೂ ಇಬ್ಬರೂ ವಿಚಲಿತರಾಗದೇ ಬ್ಯಾಟ್ ಬೀಸಿದರು. ಇದರಿಂದ ಪವರ್ಪ್ಲೇ (ಮೊದಲ 10ಓವರ್) ಮುಕ್ತಾಯಕ್ಕೆ ತಂಡ 6 ರನ್ರೇಟ್ನಲ್ಲಿ 66 ರನ್ ಕಲೆಹಾಕಿತ್ತು. ಈ ಜೊತೆಯಾಟ ರನ್ಔಟ್ನಿಂದ ಬ್ರೇಕ್ ಆಯಿತು. 42 ರನ್ ಗಳಿಸಿ ಆಡುತ್ತಿದ್ದ ಮ್ಯಾಕ್ಸ್ ಓಡೌಡ್ ಓಟ ಕದಿಯುವಾಗ ವಿಕೆಟ್ ಕೊಟ್ಟು 8 ರನ್ನಿಂದ ಅರ್ಧಶತಕ ಕಳೆದುಕೊಂಡರು.