ಲಖನೌ (ಉತ್ತರ ಪ್ರದೇಶ): 2019ರ ವಿಶ್ವಕಪ್ನಲ್ಲಿ ಒಂದು ಗೆಲುವು ಕಾಣದ ಅಫ್ಘಾನಿಸ್ತಾನ 2023ರಲ್ಲಿ ತನ್ನ ನಾಲ್ಕನೇ ಗೆಲುವನ್ನು ದಾಖಲಿಸಿದೆ. ಲಖನೌನ ಏಕನಾ ಕ್ರಿಕೆಟ್ ಸ್ಟೇಡಿಯಂ ನೆದರ್ಲೆಂಡ್ಸ್ ತಂಡದ ವಿರುದ್ಧ ಅಫ್ಘಾನ್ 7 ವಿಕೆಟ್ಗಳ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಅಫ್ಘಾನ್ ಪರ ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ ತಲಾ ಅರ್ಧಶತಕ ಗಳಿಸಿದ್ದು, ಡಚ್ಚರು ನೀಡಿದ್ದ 180 ರನ್ಗಳ ಗುರಿಯನ್ನು 31.3 ಬಾಲ್ನಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್, ಪಾಕಿಸ್ತಾನ, ಶ್ರೀಲಂಕಾವನ್ನು ಮಣಿಸಿದ್ದ ಅಫ್ಘಾನ್ ಇಂದು (ಶುಕ್ರವಾರ) ಕ್ರಿಕೆಟ್ ಶಿಶು ನೆದರ್ಲೆಂಡ್ಸ್ ಮೇಲೆಯೂ ಜಯ ದಾಖಲಿಸಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಅಫ್ಘಾನ್ ಗೆಲುವು ದಾಖಲಿಸಿದಲ್ಲಿ ಸೆಮೀಸ್ಗೆ ಪ್ರವೇಶಿಸುವ ಸಾಧ್ಯತೆ ಇದೆ. 2015ರ ವಿಶ್ವಕಪ್ನಲ್ಲಿ ಒಂದೇ ಒಂದು ಗೆಲುವು ಕಂಡಿದ್ದ ಅಫ್ಘಾನ್ ವರ್ಷದಿಂದ ವರ್ಷಕ್ಕೆ ತನ್ನ ಪ್ರದರ್ಶನವನ್ನು ಉತ್ತಮಗೊಳಿಸುತ್ತಾ ಸಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಬಂದ ಡಚ್ಚರು 47 ಓವರ್ಗಳನ್ನು ಆಡಿ 179ಕ್ಕೆ ಆಲ್ಔಟ್ ಆದರು. ಒತ್ತಡ ರಹಿತ ಗುರಿಯನ್ನು ಬೆನ್ನಟ್ಟಿದ ಅಫ್ಘಾನ್ನರಿಗೆ ಡಚ್ ಬೌಲರ್ಗಳು ಕಾಡಿದರು. 10 ಓವರ್ಗೆ 1 ವಿಕೆಟ್ ಕಿತ್ತಿದ್ದಲ್ಲದೇ, 55 ರನ್ಗಳಿಗೆ ನಿಯಂತ್ರಿಸಿದರು. 11ನೇ ಓವರ್ನಲ್ಲಿ ಎರಡನೇ ವಿಕೆಟ್ ಅನ್ನೂ ಕಬಳಿಸಿದರು. ಇದರಿಂದ ಆರಂಭಿಕರಾದ ರಹಮಾನುಲ್ಲಾ ಗುರ್ಬಾಜ್ 10 ಮತ್ತು ಇಬ್ರಾಹಿಂ ಜದ್ರಾನ್ 20 ರನ್ಗೆ ಔಟ್ ಆದರು.
ಮೂರನೇ ವಿಕೆಟ್ಗೆ ಒಂದಾದ ರಹಮತ್ ಷಾ ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ 74 ರನ್ಗಳ ಜೊತೆಯಾಟ ಮಾಡಿದರು. ಈ ಪಾಲುದಾರಿಕೆ ತಂಡದ ಗೆಲುವಿಗೆ ಆಸರೆ ಆಯಿತು. ರೆಹಮತ್ ಶಾ ತಮ್ಮ 25ನೇ ಏಕದಿನ ಅರ್ಧಶತಕವನ್ನು ದಾಖಲಿಸಿದರು. ಇನ್ನಿಂಗ್ಸ್ನಲ್ಲಿ ಅವರು 54 ಬಾಲ್ ಎದುರಿಸಿ 8 ಬೌಂಡರಿ ಸಹಾಯದಿಂದ 52 ರನ್ ಗಳಿಸಿದರು. ಗೆಲುವಿಗೆ 50 ರನ್ಗಳ ಅವಶ್ಯಕತೆ ಇದ್ದಾಗ ಶಾ ವಿಕೆಟ್ ಕಳೆದುಕೊಂಡರು.
ಕೊನೆಗೆ ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಪಂದ್ಯವನ್ನು ಗೆಲುವಿನ ದಡಕ್ಕೆ ತೆಗೆದುಕೊಂಡು ಹೋದರು. ಈ ನಡುವೆ ನಾಯಕ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು. ಹಶ್ಮತುಲ್ಲಾ ಶಾಹಿದಿ ಇನ್ನಿಂಗ್ಸ್ನಲ್ಲಿ 64 ಬಾಲ್ ಎದುರಿಸಿ 6 ಬೌಂಡರಿ ಸಹಾಯದಿಂದ ಅಜೇಯ 56 ರನ್ ಗಳಿಸಿದರು. ಅಜ್ಮತುಲ್ಲಾ ಒಮರ್ಜಾಯ್ ಗೆಲುವಿಗೆ 31 ರನ್ನ ಅಜೇಯ ಕೊಡುಗೆ ನೀಡಿದರು. ಅಫ್ಘಾನಿಸ್ತಾನ 31.3 ಓವರ್ಗೆ 3 ವಿಕೆಟ್ ನಷ್ಟಕ್ಕೆ 181 ರನ್ ಕಲೆಹಾಕಿದರು. ಇದರಿಂದ ಅಫ್ಘಾನ್ 7 ವಿಕೆಟ್ಗಳ ಜಯ ದಾಖಲಿಸಿತು. ನೆದರ್ಲೆಂಡ್ಸ್ ಪರ ಸಾಕಿಬ್ ಜುಲ್ಫಿಕರ್, ರೋಲೋಫ್ ವ್ಯಾನ್ ಡೆರ್ ಮೆರ್ವೆ ಮತ್ತು ಲೋಗನ್ ವ್ಯಾನ್ ಬೀಕ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ನಬಿ ಪಂದ್ಯ ಶ್ರೇಷ್ಠ:ಮೊದಲ ಇನ್ನಿಂಗ್ಸ್ನಲ್ಲಿ 9.3 ಓವರ್ ಬೌಲಿಂಗ್ ಮಾಡಿ 28 ರನ್ ಕೊಟ್ಟು 3 ವಿಕೆಟ್ ಕಬಳಿಸಿದ ಮೊಹಮ್ಮದ್ ನಬಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:ಈಡನ್ ಗಾರ್ಡನ್ಸ್ ಟಿಕೆಟ್ ಹಗರಣ: 'ಬುಕ್ ಮೈ ಶೋ' ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ ಕೋಲ್ಕತ್ತಾ ಪೊಲೀಸರು