ಕೋಲ್ಕತ್ತಾ (ಪಶ್ಚಿಮ ಬಂಗಾಳ): ಈ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಕುತೂಹಲವನ್ನು ನಾಳಿನ (ಭಾನುವಾರ) ಈಡನ್ಗಾರ್ಡನ್ಸ್ ಪಂದ್ಯ ಸೃಷ್ಟಿಸಿದೆ ಎಂದರೆ ತಪ್ಪಾಗದು. ಏಕೆಂದರೆ, ಒಂದೆಡೆ ಬಲಿಷ್ಠ ಬ್ಯಾಟಿಂಗ್ ಬಲ ಇದ್ದರೆ ಮತ್ತೊಂದೆಡೆ ಪ್ರಬಲ ಬೌಲಿಂಗ್ ದಾಳಿ ಇದೆ. 7 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 350+ ರನ್ ಕಲೆಹಾಕಿದ್ದರೆ, ಭಾರತ ಎದುರಾಳಿಯನ್ನು 300ರ ಒಳಗೆ ಕಟ್ಟಿಹಾಕುವುದರಲ್ಲಿ ಯಶಸ್ವಿ ಆಗಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸದೃಢ ಪ್ರದರ್ಶನ ನೀಡುತ್ತಾ ಯಾವುದೇ ಸೋಲು ಕಾಣದೇ ವಿಶ್ವಕಪ್‌ನಲ್ಲಿ ಅಜೇಯವಾಗಿದೆ. ಈ ಓಟಕ್ಕೆ ಇನ್ನುಳಿದ ಎರಡು ಪಂದ್ಯದಲ್ಲಿ ಯಾರು ಬ್ರೇಕ್ ಹಾಕುತ್ತಾರೆ ಎಂದು ವಿಶ್ವವೇ ಎದುರು ನೋಡುತ್ತಿದೆ. ಅನುಭವಿಗಳು ಮತ್ತು ಯುವಕರನ್ನು ಹೊಂದಿರುವುದೇ ತಂಡದ ಯಶಸ್ಸಿನ ಮೂಲ ಎಂಬಂತೆ ಕಾಣುತ್ತಿದೆ.
ಬರ್ತ್ ಡೇ ಬಾಯ್ ವಿರಾಟ್ರಿಂದ 49ನೇ ಶತಕ ನಿರೀಕ್ಷೆ: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಮೂರು ಬಾರಿ ಶತಕದ ಅಂಚಿನಲ್ಲಿ ವಿಕೆಟ್ ಕಳೆದುಕೊಂಡಿರುವ ವಿರಾಟ್ ನಾಳೆ ಜನ್ಮದಿನದಂದು 49ನೇ ಏಕದಿನ ಶತಕ ದಾಖಲಿಸಿ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿದೆ. ವಿಶ್ವಕಪ್ ಪಂದ್ಯಗಳನ್ನು ತಂಡ ಗೆದ್ದರೂ ಜನ ವಿರಾಟ್ ಕೊಹ್ಲಿಯ ಶತಕ ಕಾಣದೇ ತೃಪ್ತರಾಗುತ್ತಿಲ್ಲ.
ರೋಹಿತ್ ಅದ್ಧೂರಿ ಆರಂಭ: ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ತಂಡಕ್ಕೆ ಬಿರುಸಿನ ಆರಂಭವನ್ನು ನೀಡುತ್ತಿರುವುದು ರನ್ರೇಟ್ಗೆ ಸಹಾಯ ಆಗುತ್ತಿದೆ. ಹಾಗೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟರ್ಗಳಿಗೆ ಸಹಾಯ ಆಗುತ್ತಿದೆ. ಕಳೆದ ಪಂದ್ಯದಲ್ಲಿ ಗಿಲ್ ಸಹ ಲಯಕ್ಕೆ ಮರಳಿದ್ದು, ಆರಂಭಿಕರಿಬ್ಬರೂ ಜೊತೆಯಾಟ ನೀಡುವಲ್ಲಿ ಸಫಲರಾದರೆ, 400 ಗಡಿ ದಾಟಿಸುವ ಸಾಮರ್ಥ್ಯ ತಂಡಕ್ಕಿದೆ. ನಾಲ್ಕನೇ ಕ್ರಮಾಂಕದಲ್ಲಿ ವಿಫಲತೆ ಕಾಣುತ್ತಿದ್ದ ಶ್ರೇಯಸ್ ಅಯ್ಯರ್, ಕಳೆದ ಪಂದ್ಯದಲ್ಲಿ ಘರ್ಜಿಸಿದ್ದು, ತಂಡಕ್ಕೆ ಇನ್ನಷ್ಟು ಬಲ ಹೆಚ್ಚಿಸಿದೆ. 5ನೇ ಆಟಗಾರನಾಗಿ ಕೆ ಎಲ್ ರಾಹುಲ್ ಹೊಣೆಯನ್ನು ಯಶಸ್ವಿ ನಿಭಾಯಿಸಿದ್ದಾರೆ.
ಹಾರ್ದಿಕ್ ಬದಲು ಪ್ರಸಿದ್ಧ: ಬಾಂಗ್ಲಾ ವಿರುದ್ಧ ಗಾಯಕ್ಕೆ ತುತ್ತಾದ ಹಾರ್ದಿಕ್ ಪಂದ್ಯ ಅವರು ವಿಶ್ವಕಪ್ನ ಮುಂದಿನ ಪಂದ್ಯಗಳಿಗೆ ಅಲಭ್ಯರಾಗಿದ್ದು, ಅವರ ಬದಲಾಗಿ ನಾಲ್ಕನೇ ವೇಗದ ಬೌಲರ್ ತಂಡಕ್ಕೆ ಸೇರಿಕೊಳ್ಳಲಿದ್ದಾರೆ. ಕನ್ನಡಿಗ ಪ್ರಸಿದ್ಧ್ ಕೃಷ್ಣ ಅವರಿಗೆ ವಿಶ್ವಕಪ್‌ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ವೇಗಿಗಳಲ್ಲಿ ಯಾರಾದರೂ ಗಾಯಗೊಂಡಲ್ಲಿ ಪ್ರಸಿದ್ಧ್ ತಂಡದಲ್ಲಿ ಸೇರಿಕೊಳ್ಳಲಿದ್ದಾರೆ.