ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಸತತ ಏಳು ಪಂದ್ಯಗಳನ್ನು ಗೆದ್ದು ಈಗಾಗಲೇ ಸೆಮೀಸ್ಗೆ ಪ್ರವೇಶ ಪಡೆದಿರುವ ರೋಹಿತ್ ಶರ್ಮಾ ಬಳಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎದುರಾಳಿ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಜೆರಾಲ್ಡ್ ಕೊಯೆಟ್ಜಿಯ ಬದಲಿಗೆ ಸ್ಪಿನ್ನರ್ ತಬ್ರೈಜ್ ಶಮ್ಸಿ ಕಣಕ್ಕಿಳಿಯಲಿದ್ದಾರೆ.
ವಿಶ್ವಕಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಟೀಂ ಇಂಡಿಯಾ 14 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ತಾನಾಡಿದ 7 ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತು 6ರಲ್ಲಿ ಗೆಲುವು ಸಾಧಿಸಿದೆ. ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ರೋಹಿತ್ ಪಡೆ ಈ ಪಂದ್ಯವನ್ನೂ ಗೆದ್ದು ಅಗ್ರ ಸ್ಥಾನದಲ್ಲಿ ಮುಂದುವರೆಯುವ ಲೆಕ್ಕಾಚಾರದಲ್ಲಿದೆ.
ವಿಶ್ವಸಮರದಲ್ಲಿ ಇದುವರೆಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಹರಿಣಗಳು 3 ಪಂದ್ಯಗಳನ್ನು ಗೆದ್ದು ಮೇಲುಗೈ ಹೊಂದಿದ್ದಾರೆ. ಉಳಿದ 2ರಲ್ಲಿ ಗೆದ್ದಿರುವ ಭಾರತ ಇದನ್ನು ಸರಿಗಟ್ಟುವ ಗುರಿ ಹೊಂದಿದೆ. ಟೂರ್ನಿಯುದ್ದಕ್ಕೂ ನಾಯಕ ರೋಹಿತ್ ಶರ್ಮಾ ಅವರಿಂದ ಹಿಡಿದು ಇಡೀ ತಂಡ ಆಲ್ರೌಂಡ್ ಆಟ ಪ್ರದರ್ಶಿಸಿದೆ. ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ನೊಂದಿಗೆ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಬಂದಿದೆ. ಇದನ್ನು ಇಂದಿನ ಪಂದ್ಯದಲ್ಲೂ ಮುಂದುವರೆಸಿಕೊಂಡು ಹೋಗುವ ಇರಾದೆಯನ್ನು ಟೀಂ ಇಂಡಿಯಾ ಹೊಂದಿದೆ.
ಇದನ್ನೂ ಓದಿ:ಬರ್ತ್‌ಡೇ ಬಾಯ್ ವಿರಾಟ್ ಕೊಹ್ಲಿಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆಯಿಂದ ಚಿನ್ನ ಲೇಪಿತ ಬ್ಯಾಟ್ ಗಿಫ್ಟ್