ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್ ಜಯ ದಾಖಲಿಸಿದೆ. 327 ರನ್ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್ಗೆ 83 ರನ್ ಗಳಿಸಿ ಆಲ್ಔಟ್ ಆಯಿತು. ಇದರಿಂದ ಭಾರತ 243 ರನ್ಗಳ ಬೃಹತ್ ಜಯ ದಾಖಲಿಸಿದೆ.
ಟಾಸ್ ಗೆದ್ದ ಭಾರತ ದಕ್ಷಿಣ ಆಫ್ರಿಕಾದ ವೈಫಲ್ಯತೆಯನ್ನು ಆಧಾರವಾಗಿ ಇಟ್ಟಕೊಂಡು ನಿರ್ಣಯವನ್ನು ಮಾಡಿತು. ನಡೆಯುತ್ತಿರುವ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟ ಪಟ್ಟಿದೆ. ಹೀಗಾಗಿ ಟಾಸ್ ಗೆದ್ದ ರೋಹಿತ್ ಶರ್ಮಾ ಟೀಮ್ ಇಂಡಿಯಾ ಚೇಸಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ, ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಮಾಡಿದರು. ಅಲ್ಲದೇ, ಅದಕ್ಕೆ ತಕ್ಕ ಬ್ಯಾಟಿಂಗ್ ಪ್ರದರ್ಶನ ನೀಡಿದ ತಂಡ ದೊಡ್ಡ ಮೊತ್ತವನ್ನೇ ಕಲೆಹಾಕಿತು.
ರೋಹಿತ್ ಶರ್ಮಾ ಅಬ್ಬರದ 40 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ದಾಖಲೆಯ ಶತಕ, ಶ್ರೇಯಸ್ ಅಯ್ಯರ್ ಅರ್ಧಶತಕ ಗಳಿಸಿದರು. ಇವರ ಇನ್ನಿಂಗ್ಸ್ನ ಬಲದಿಂದ ಭಾರತ 50 ಓವರ್ಗೆ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಲು ಮೈದಾನಕ್ಕಿಳಿದ ಹರಿಣಗಳಿಗೆ ಭಾರತದ ಬೌಲರ್ಗಳು ಕಾಡಿದರು. ಕಳೆದ ಶ್ರೀಲಂಕಾ ವಿರುದ್ಧದ ಬೌಲಿಂಗ್ ಪ್ರದರ್ಶನವೇ ಇಂದು ಕಂಡು ಬಂತು. ಬಲಿಷ್ಠ ಬ್ಯಾಟಿಂಗ್ ಬಲ ಹೊಂದಿದ್ದ ದಕ್ಷಿಣ ಆಫ್ರಿಕಾ ಅಲ್ಪಮೊತ್ತಕ್ಕೆ ಕುಸಿಯಿತು.