ಅಹಮದಾಬಾದ್ (ಗುಜರಾತ್): ನಾಯಕ ರೋಹಿತ್ ಶರ್ಮಾ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಇನ್ನಿಂಗ್ಸ್ನಿಂದ ಪಾಕಿಸ್ತಾನದ ವಿರುದ್ಧ ಭಾರತ 19.3 ಓವರ್ಗಳನ್ನು ಉಳಿಸಿಕೊಂಡು 7 ವಿಕೆಟ್ಗಳ ಗೆಲುವನ್ನು ದಾಖಲಿಸಿದೆ. ವಿಶ್ವಕಪ್ನ ಪಾಕಿಸ್ತಾನದ ವಿರುದ್ಧದ ಎಂಟನೇ ಮುಖಾಮಖಿಯಲ್ಲೂ ಟೀಮ್ ಇಂಡಿಯಾ ಜಯಭೇರಿ ಬಾರಿಸಿ ಅಜೇಯವಾಗಿ ಮುಂದುವರೆದಿದೆ.
2023ರ ವಿಶ್ವಕಪ್ನ ಲೀಗ್ ಹಂತದಲ್ಲಿ ಭಾರತಕ್ಕೆ ಮೂರನೇ ಗೆಲುವು ಇದಾಗಿದೆ. ಪಾಕಿಸ್ತಾನದ ವಿರುದ್ಧ ಭಾರತದ ಗೆಲುವು ನವ ರಾತ್ರಿ ಹಬ್ಬಕ್ಕೆ ಕಳೆಕಟ್ಟಿದಂತಾಗಿದೆ. ವಿಜಯದಶಮಿಗೆ 10 ದಿನ ಮುಂಚಿತವಾಗಿಯೇ ಟೀಮ್ ಇಂಡಿಯಾಕ್ಕೆ ಭರ್ಜರಿ ಜಯ ಸಿಕ್ಕಿದೆ. ಇದರಿಂದ ಭಾರತ ತಂಡ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಪಾಕಿಸ್ತಾನವನ್ನು 191 ರನ್ಗೆ ಕಟ್ಟಿಹಾಕಿತು. ಪಾಕಿಸ್ತಾನ ಪರ ನಾಯಕ ಬಾಬರ್ ಅಜಮ್ ಮತ್ತು ರಿಜ್ವಾನ್ ಮಾತ್ರ ಉತ್ತಮ ಪ್ರದರ್ಶನ ನೀಡಿದರು. 192 ರನ್ನ ಗುರಿ ಬೆನ್ನತ್ತಿದ ಭಾರತ ತ್ವರಿತ ಆರಂಭವನ್ನು ಪಡೆಯಿತಾದರೂ, ವೇಗವಾಗಿ ವಿಕೆಟ್ನ್ನು ಕಳೆದುಕೊಂಡಿತು. ಡೆಂಗ್ಯೂವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಶುಭಮನ್ ಗಿಲ್ ಅಬ್ಬರಿಸುವ ಮನೋಸ್ಥಿತಿಯಲ್ಲಿ ಮೈದಾನಕ್ಕಿಳಿದಿದ್ದರು. ಅದರಂತೆ ಆರಂಭದಲ್ಲೇ 4 ಬೌಂಡರಿಯಿಂದ 16 ರನ್ ಗಳಿಸಿ ವೇಗವಾಗಿ ಇನ್ನಿಂಗ್ಸ್ ಕಟ್ಟುತ್ತಿರುವಾಗ ಮಿಸ್ ಟೈಮಿಂಗ್ ಶಾಟ್ನಿಂದ ವಿಕೆಟ್ ಕೊಟ್ಟರು.
ಚೇಸಿಂಗ್ ಕಿಂಗ್ ಹಾಗೂ ಪಾಕಿಸ್ತಾನದ ವಿರುದ್ಧ ಉತ್ತಮ ಅಂಕಿಅಂಶಗಳನ್ನು ಹೊಂದಿದ್ದ ವಿರಾಟ್ ಕೊಹ್ಲಿಯೂ ಚುಟುಕು ಇನ್ನಿಂಗ್ಸ್ಗೆ ಪೆವಿಲಿಯನ್ಗೆ ಮರಳಿದರು. ಮೈದಾನಕ್ಕೆ ಇಳಿಯುತ್ತಿದ್ದಂತೆ ಪಾಕಿಸ್ತಾನ ಬೌಲರ್ಗಳ ಮೇಲೆ ಸವಾರಿ ಮಾಡಿದ ಅವರು 3 ಬೌಂಡರಿ ಗಳಿಸಿ 16 ರನ್ ಗಳಿಸಿದ್ದರು. ಆದರೆ ಹಸನ್ ಅಲಿ ಬೌಲಿಂಗ್ನಲ್ಲಿ ಸಿಕ್ಸ್ಗೆ ಪ್ರಯತ್ನಿಸಿದ ವಿರಾಟ್ ಕ್ಯಾಚ್ ಕೊಟ್ಟರು.
14 ರನ್ನಿಂದ ಶತಕ ಕಳೆದುಕೊಂಡ ರೋಹಿತ್: ಎರಡು ವಿಕೆಟ್ ಬಿದ್ದರೂ ನಾಯಕ ರೋಹಿತ್ ಶರ್ಮಾ ಅಬ್ಬರದ ಇನ್ನಿಂಗ್ಸ್ ಆಡಿದರು. ಅಫ್ಘಾನಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಹಿಟ್ ಮ್ಯಾನ್ ರೋಹಿತ್ ಅದೇ ಫಾರ್ಮ್ನ್ನು ಮುಂದುವರೆಸಿದರು. ಪಾಕ್ನ ಬೌಲರ್ಗಳ ಹಾಕಿದ ಚೆಂಡನ್ನು ಮೈದಾನದ ದಿಕ್ಕು ದಿಕ್ಕುಗಳಿಗೆ ಬೌಂಡರಿ ಮತ್ತು ಸಿಕ್ಸ್ಗೆ ಅಟ್ಟಿದರು. ನಾಯಕನಾಗಿ ತಂಡದ ರನ್ರೇಟ್ನ ಮೇಲೆ ಗಮನ ಹರಿಸಿ ಅವರು ಬ್ಯಾಟಿಂಗ್ ಮಾಡಿದ್ದರು. ಪಂದ್ಯವನ್ನು ಉತ್ತಮ ರನ್ರೇಟ್ನೊಂದಿಗೆ ಗೆಲುವು ದಾಖಲಿಸುವುದರಿಂದ ಭಾರತಕ್ಕೆ ಲೀಗ್ನಲ್ಲಿ ಮುಂದಿನ ದಿನಗಳಲ್ಲಿ ಸಹಕಾರ ಆಗಲಿದೆ.
63 ಬಾಲ್ ಎದುರಿಸಿ 6 ಸಿಕ್ಸ್ ಮತ್ತು 6 ಬೌಂಡರಿಯಿಂದ 86 ರನ್ ಗಳಸಿ ಆಡುತ್ತಿದ್ದ ಹಿಟ್ಮ್ಯಾನ್ ಶಾಹೀನ್ ಶಾ ಆಫ್ರಿದಿ ಬಾಲ್ನಲ್ಲಿ ವಿಕೆಟ್ ಕೊಟ್ಟರು. ವಿಶ್ವಕಪ್ನಲ್ಲಿ 8ನೇ ಶತಕ ದಾಖಲಿಸಲು ಅವರಿಗೆ ಇನ್ನೂ ಕೇವಲ 14 ರನ್ ಕಡಿಮೆ ಇತ್ತು. ಕಳೆದ ಪಂದ್ಯದಲ್ಲಿ 7ನೇ ಶತಕ ದಾಖಲಿಸಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ರೋಹಿತ್ ಮುರಿದಿದ್ದರು.
ಗೆಲುವಿನ ದಡ ಸೇರಿಸಿದ ಅಯ್ಯರ್ - ರಾಹುಲ್ : 3 ವಿಕೆಟ್ ಕಳೆದುಕೊಂಡ ನಂತರ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಪಾಕಿಸ್ತಾನ ಸ್ಪಿನ್ನರ್ಗಳ ಮುಂದೆ ನಿಧಾನಗತಿಯಲ್ಲಿ ರನ್ ಕಲೆಹಾಕಿದರು. ರೋಹಿತ್ ಶರ್ಮಾ ಕ್ರೀಸ್ನಲ್ಲಿದ್ದಾಗ ಭಾರತ 25 ಓವರ್ ಒಳಗಾಗಿ ಪಂದ್ಯವನ್ನು ಗೆಲ್ಲುವ ಸ್ಥಿತಿಯಲ್ಲಿತ್ತು. ಆದರೆ ಈ ಇಬ್ಬರು ಬ್ಯಾಟರ್ಗಳು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರಿಂದ ರನ್ನ ವೇಗ ಕಡಿಮೆ ಆಯಿತು. 30.3ನೇ ಓವರ್ಗೆ ಭಾರತ ಗೆಲುವಿನ ದಡ ಮುಟ್ಟಿತು. ಶ್ರೇಯಸ್ ಅಯ್ಯರ್ 62 ಬಾಲ್ನಲ್ಲಿ 2 ಸಿಕ್ಸ್ ಮತ್ತು 3 ಬೌಂಡರಿಯಿಂದ 53 ರನ್ ಕಲೆಹಾಕಿ ಅಜೇಯರಾಗಿ ಉಳಿದರು. ಕೆ ಎಲ್ ರಾಹುಲ್ 19* ರನ್ ಗಳಿಸಿದರು.
ಪಾಕಿಸ್ತಾನ ಪರ ಶಾಹೀನ್ ಶಾ ಆಫ್ರಿದಿ 2 ಮತ್ತು ಹಸನ್ ಅಲಿ 1 ವಿಕೆಟ್ ಪಡೆದರು. 7 ಓವರ್ನಲ್ಲಿ 1 ಮೇಡೆನ್ ಓವರ್ ಮಾಡಿ 2.7 ಎಕಾನಮಿಯಲ್ಲಿ 2 ವಿಕೆಟ್ ಕಿತ್ತ ಬುಮ್ರಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:Cricket World Cup 2023: ಭಾರತದ ಬೌಲಿಂಗ್ ದಾಳಿಗೆ ನಲುಗಿದ ಪಾಕ್.. 191ಕ್ಕೆ ಸರ್ವಪತನ