ಧರ್ಮಶಾಲಾ (ಹಿಮಾಚಲ ಪ್ರದೇಶ):ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಇಂದು ನ್ಯೂಜಿಲೆಂಡ್ ತಂಡವನ್ನು ಮಣಿಸಿದ್ದು, ಪ್ರತಿಷ್ಟಿತ ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸಿತು. ಧರ್ಮಶಾಲಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ತಂಡವು 2 ಓವರ್ ಮತ್ತು 4 ವಿಕೆಟ್ ಉಳಿಸಿಕೊಂಡು ಕಿವೀಸ್ ನೀಡಿದ 274 ರನ್‌ಗಳ ಗುರಿ ಭೇದಿಸಿತು. ಈ ಮೂಲಕ ವಿಶ್ವಕಪ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದೆ.
ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ ಡೇರಿಲ್ ಮಿಚೆಲ್ ಶತಕ ಮತ್ತು ರಚಿನ್ ರವೀಂದ್ರ ಅರ್ಧಶತಕದ ಇನ್ನಿಂಗ್ಸ್ ಬಲದಿಂದ 273 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಭಾರತಕ್ಕೆ ಎಂದಿನಂತೆ ನಾಯಕ ರೋಹಿತ್ ಶರ್ಮಾ ಬಿರುಸಿನ ಆರಂಭ ನೀಡಿದರು. ಮೊದಲ ವಿಕೆಟ್ಗೆ ಶುಭ್‌ಮನ್ ಗಿಲ್ ಮತ್ತು ರೋಹಿತ್ ಶರ್ಮಾ 71 ರನ್‌ಗಳ ಜತೆಯಾಟ ಮಾಡಿದರು. ಆದರೆ ಸತತ ಎರಡು ವಿಕೆಟ್‌ಗಳ ಪತನ ಭಾರತದ ಆತಂಕಕ್ಕೆ ಕಾರಣವಾಯಿತು. ತಂಡ 71 ರನ್‌ಗಳಿಸಿದ್ದಾಗ ರೋಹಿತ್ ಶರ್ಮಾ (46) 4 ರನ್‌ನಿಂದ ಅರ್ಧಶತಕ ವಂಚಿತರಾಗಿ ಪೆವಿಲಿಯನ್ಗೆ ಮರಳಿದರು. ತಂಡಕ್ಕೆ ಮತ್ತೆ 5 ರನ್ ಸೇರುವಷ್ಟರಲ್ಲಿ ಗಿಲ್ (26) ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಜತೆಗೆ ಅರ್ಧಶತಕದ ಪಾಲುದಾರಿಕೆ ಮಾಡಿದರು. ಶ್ರೇಯಸ್ ಅಯ್ಯರ್ 29 ಬಾಲ್ನಲ್ಲಿ 6 ಬೌಂಡರಿಯಿಂದ 33 ರನ್ ಗಳಿಸಿದರೆ, ಕೆ.ಎಲ್.ರಾಹುಲ್ 35 ಬಾಲ್ನಲ್ಲಿ 27 ರನ್ ಗಳಿಸಿ ವಿಕೆಟ್ ಕೊಟ್ಟರು. ಗಾಯಗೊಂಡ ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಸ್ಥಾನ ಪಡೆದುಕೊಂಡ ಸೂರ್ಯಕುಮಾರ್ ಯಾದವ್ (2) ರನೌಟ್ಗೆ ಬಲಿಯಾದರು.