ಧರ್ಮಶಾಲಾ (ಹಿಮಾಚಲ ಪ್ರದೇಶ): ಹಾಲಿ ವಿಶ್ವಕಪ್ನಲ್ಲಿ ಒಂದು ಸೋಲು ಕಾಣದ ಅಜೇಯ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ಇಂದು ಹಿಮಾಲಯದ ತಪ್ಪಲಲ್ಲಿರುವ ಮನಮೋಹಕ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಕ್ಕೆ ಈ ಗೆಲುವು ಪ್ರತಿಷ್ಠೆಯಾಗಿದೆ. ಕಳೆದ ವಿಶ್ವಕಪ್ ಸೆಮಿಫೈನಲ್ನಲ್ಲಿ ಕಿವೀಸ್ ವಿರುದ್ಧ ಅನುಭವಿಸಿದ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ವಿಶ್ವಕಪ್ಗೂ ಮುನ್ನ ಏಷ್ಯಾಕಪ್ನಲ್ಲಿ ಜಯ ದಾಖಲಿಸಿ, ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡ ಟೀಮ್ ಇಂಡಿಯಾ ಬಲಿಷ್ಠವಾಗಿ ಕಾಣುತ್ತಿದೆ. ತವರು ಮೈದಾನದ ಲಾಭದ ಜೊತೆಗೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ತಂಡ ನಾಲ್ಕು ತಂಡಗಳನ್ನು ಮಣಿಸಿದೆ. ಚೊಚ್ಚಲ ಪ್ರಶಸ್ತಿಯ ಹಸಿವಿನಲ್ಲಿರುವ ಕಿವೀಸ್ ಪ್ರಮುಖ ಆಟಗಾರ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಅಸಾದಾರಣ ಆಟವನ್ನು ಆಡುತ್ತಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಹಾರ್ದಿಕ್ ಪಾಂಡ್ಯ ಕೊರತೆ: ತಂಡದ ಪ್ರಮುಖ ಆಲ್ರೌಂಡರ್ ಆಗಿದ್ದ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ಪಂದ್ಯದಲ್ಲಿ ಪಾದದ ಗಾಯಕ್ಕೆ ತುತ್ತಾದರು. ಹಾರ್ದಿಕ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಬೌಲಿಂಗ್ನಲ್ಲಿ 5ಕ್ಕೂ ಹೆಚ್ಚಿನ ಓವರ್ಗಳನ್ನು ವೇಗಿಗಳ ಜೊತೆ ಹಂಚಿಕೊಳ್ಳುತ್ತಿದ್ದ ಅವರು 6ನೇ ವಿಕೆಟ್ನಲ್ಲಿ ತಂಡಕ್ಕೆ ಬಿರುಸಿನ ಬ್ಯಾಟಿಂಗ್ ಬಲವಾಗಿದ್ದರು.
ಹಾರ್ದಿಕ್ ಅಲಭ್ಯತೆಯಲ್ಲಿ ಶಮಿ, ಸೂರ್ಯ, ಕಿಶನ್ ಮುಂದಿರುವ ಸಾಧ್ಯತೆಗಳಿವೆ ಎಂದು ಕೋಚ್ ಹೇಳಿದ್ದಾರೆ. ಆದರೆ ಆಡುವ ಬಳಗಕ್ಕೆ ಯಾರು ಆಯ್ಕೆ ಆಗಿಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ಮೂವರೂ ಏಕದಿನ ಮಾದರಿಯಲ್ಲಿ ಉತ್ತಮ ಅಂಕಿ - ಅಂಶಗಳನ್ನು ಹೊಂದಿದ್ದಾರೆ. ಆದರೆ ಧರ್ಮಶಾಲಾ ಮೈದಾನಕ್ಕೆ ಸೂಕ್ತ ಆಟಗಾರ ಯಾರು ಎಂಬುದು ನಾಯಕ ಮತ್ತು ಕೋಚ್ ನಡುವೆ ಇರುವ ಗೊಂದಲವಾಗಿದೆ.
ಸಮಬಲದ ಬ್ಯಾಟಿಂಗ್: ಕಿವೀಸ್ ಮತ್ತು ಟೀಮ್ ಇಂಡಿಯಾದಲ್ಲಿ ಬ್ಯಾಟಿಂಗ್ ಬಲ ಹೆಚ್ಚುಕಮ್ಮಿ ಸಮನಾಗಿದೆ. ರೋಹಿತ್ ಶರ್ಮಾ ಮತ್ತು ಗಿಲ್ ಅಬ್ಬರದ ಆರಂಭ ನೀಡಿದರೆ, ವಿರಾಟ್, ಅಯ್ಯರ್ ಮತ್ತು ಕೆ ಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ರನ್ ಕಲೆ ಹಾಕಿದ್ದಾರೆ. ಕಿವೀಸ್ನಲ್ಲಿ ಡೆವೊನ್ ಕಾನ್ವೇ, ವಿಲ್ ಯಂಗ್ ಆರಂಭಿಕರಾಗಿ ಪರಿಣಾಮ ಬೀರಿದರೆ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ ಮಧ್ಯಮ ಕ್ರಮಾಂಕದಲ್ಲಿ ಮಾರಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಮಿಚೆಲ್ ಸ್ಯಾಂಟ್ನರ್ ಸಹ ತಂಡಕ್ಕೆ ಬ್ಯಾಟಿಂಗ್ ಬಲವಾಗಿದ್ದಾರೆ. ಇದರಿಂದ ಇಂದಿನ ರೋಚಕವಾಗಿರಲಿದೆ.