ಪುಣೆ (ಮಹಾರಾಷ್ಟ್ರ): ತವರಿನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುತ್ತಿದ್ದು, ಮೂರು ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪುಣೆಯ ಮೈದಾನದಲ್ಲಿ ಗುರುವಾರ ರೋಹಿತ್ ಬಳಗಕ್ಕೆ ಬಾಂಗ್ಲಾದೇಶ ನಾಲ್ಕನೇ ಸವಾಲಾಗಿದೆ. ಮೂರು ಪಂದ್ಯದಲ್ಲಿ ತಂಡ ಪ್ರತಿ ವಿಭಾಗದಲ್ಲೂ ಸಾಂಘಿಕ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. ಹೀಗಾಗಿ ಭಾರತ ನಾಳಿನ ಪಂದ್ಯವನ್ನೂ ಗೆಲ್ಲುವ ಫೇವರೆಟ್ ತಂಡವೂ ಹೌದು.
ಭರ್ಜರಿ ಆರಂಭದ ನಿರೀಕ್ಷೆ:ಜ್ವರದಿಂದ ಚೇತರಿಸಿಕೊಂಡ ಶುಭ್‌ಮನ್ ಗಿಲ್ ಪಾಕಿಸ್ತಾನದ ಮುಂದೆ ದೊಡ್ಡ ಇನ್ನಿಂಗ್ಸ್ ಕಟ್ಟದಿದ್ದರೂ 4 ಬೌಂಡರಿಯಿಂದ 16 ರನ್ ಗಳಿಸಿ ತಾವು ಫಾರ್ಮ್ನಲ್ಲಿರುವುದಾಗಿ ಸಂದೇಶ ನೀಡಿದ್ದಾರೆ. ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೂ ಉಳಿದೆರಡು ಪಂದ್ಯದಲ್ಲಿ ಕ್ರಮವಾಗಿ 131 ಮತ್ತು 86 ರನ್ ಗಳಿಸಿದ್ದರು.
ಬಲಿಷ್ಠ ಮಧ್ಯಮ ಕ್ರಮಾಂಕ: ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೂರು ಇನ್ನಿಂಗ್ಸ್ನಲ್ಲಿ ಎರಡು ಅರ್ಧಶತಕ ಗಳಿಸಿದ್ದಾರೆ. ಪುಣೆ ಮೈದಾನದಲ್ಲಿ ವಿರಾಟ್ ಆಡಿದ ಏಳು ಏಕದಿನ ಪಂದ್ಯದಲ್ಲಿ ಎರಡು ಶತಕ ಮತ್ತು 3 ಅರ್ಧಶತಕ ಸಿಡಿಸಿದ್ದಾರೆ. ಶ್ರೇಯಸ್ ಅಯ್ಯರ್ ಆಸ್ಟ್ರೇಲಿಯಾ ವಿರುದ್ಧ ವಿಫಲರಾದರೂ ಮಿಕ್ಕೆರಡು ಪಂದ್ಯಗಳಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಕೆ.ಎಲ್.ರಾಹುಲ್ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಆಟವಾಡಿ ಪಂದ್ಯ ಗೆಲ್ಲಿಸಿಕೊಟ್ಟಿದ್ದಾರೆ.
8ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಬಲ: ಕೆಳ ಕ್ರಮಾಂಕದಲ್ಲಿ ಆಟಗಾರರಿಗೆ ಬ್ಯಾಟಿಂಗ್ ಅವಕಾಶ ಸಿಕ್ಕಿಲ್ಲ. ಆದರೆ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ತಂಡಕ್ಕೆ ಕೊಡುಗೆ ನೀಡಲು ಸಿದ್ಧರಿದ್ದಾರೆ. ಆಸ್ಟ್ರೇಲಿಯಾ ಮೇಲೆ ಹಾರ್ದಿಕ್ ತಮ್ಮ ಝಲಕ್ ತೋರಿಸಿದ್ದಾರೆ. ಅಲ್ಲದೇ ಮೂವರು ಆಟಗಾರರು ಬೌಲಿಂಗ್ನಲ್ಲಿ ತಂಡಕ್ಕೆ ಭರ್ಜರಿ ಸಾಥ್ ನೀಡುತ್ತಿದ್ದಾರೆ. ಹಾರ್ದಿಕ್ ಪಂಡ್ಯ 10 ಓವರ್ಗಳನ್ನು ಮಾಡದಿದ್ದರೂ, ಪ್ರಭಾವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಶಾರ್ದೂಲ್ ಬೌಲಿಂಗ್ನಲ್ಲಿ ಪರಿಣಾಮ ಬೀರಿದ್ದಾರೆ.
ಸಿರಾಜ್, ಬುಮ್ರಾ, ಕುಲ್ದೀಪ್ ಪ್ರಬಲ ದಾಳಿ: ವೇಗದ ವಿಭಾಗದಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ರನ್ಗೆ ಕಡಿವಾಣ ಹಾಕುವುದರ ಜತೆಗೆ ವಿಕೆಟ್ ಪಡೆಯುತ್ತಿದ್ದಾರೆ. ಭಾರತ ಆಡಿದ ಮೂರು ಪಂದ್ಯದಲ್ಲಿ ಎದುರಾಳಿಗಳನ್ನು ಬೌಲರ್ಗಳು 300 ರನ್‌ಗಳೊಳಗೆ ನಿಯಂತ್ರಿಸಿದ್ದಾರೆ. ಪ್ರಸ್ತುತ ವಿಶ್ವಕಪ್ನಲ್ಲಿ ಅತಿ ಹೆಚ್ಚು (8) ವಿಕೆಟ್ ಪಡೆದ ಬೌಲರ್ ಆಗಿ ಬುಮ್ರಾ ಹೊರಹೊಮ್ಮಿದ್ದಾರೆ. ಸಿರಾಜ್ ರನ್ ಬಿಟ್ಟು ಕೊಡುತ್ತಿದ್ದಾರೆ. ಆದರೂ ವಿಕೆಟ್ ಪಡೆಯುವಲ್ಲಿ ಹಿಂದುಳಿದಿಲ್ಲ. ಮಣಿಕಟ್ಟಿನ ಸ್ಪಿನ್ನರ್ ಕುಲ್ದೀಪ್ ಯಾದವ್ ಮಧ್ಯಮ ಓವರ್ಗಳಲ್ಲಿ ತಂಡಕ್ಕೆ ವಿಕೆಟ್ ತಂದುಕೊಡುತ್ತಿದ್ದಾರೆ. ಈ ಮೂವರಿಗೆ ಆಲ್ರೌಂಡರ್ಗಳು ಸಮಾನವಾಗಿ ಸಾಥ್ ನೀಡುತ್ತಿದ್ದಾರೆ.