ಮುಂಬೈ (ಮಹಾರಾಷ್ಟ್ರ):ಹಾಲಿ ಚಾಂಪಿಯನ್ ಇಂಗ್ಲೆಂಡ್ 2023ರ ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ಶನಿವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 170 ರನ್ಗಳಿಗೆ ಸರ್ವಪತನ ಕಂಡು 229 ರನ್ನಿಂದ ಪರಾಜಯ ಅನುಭವಿಸಿದೆ. ವಿಶ್ವಕಪ್ನ ನಾಲ್ಕು ಪಂದ್ಯದಲ್ಲಿ ಮೂರು ದೊಡ್ಡ ಸೋಲು ಕಂಡಿರುವ ಆಂಗ್ಲರಿಗೆ ಪ್ಲೇ ಆಫ್ ಹಾದಿ ಹೆಚ್ಚು ಕಡಿಮೆ ಮುಚ್ಚಿದಂತಾಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ಹೆನ್ರಿಚ್ ಕ್ಲಾಸೆನ್ ಶತಕ ಹಾಗೂ ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಮತ್ತು ಮಾರ್ಕೊ ಜಾನ್ಸೆನ್ ಅವರ ಅರ್ಧಶತಕದ ಆಟದ ನೆರವಿನಿಂದ 400 ರನ್ನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡ 12ನೇ ಓವರ್ಗೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. 9ನೇ ವಿಕೆಟ್ನಲ್ಲಿ ಗಸ್ ಅಟ್ಕಿನ್ಸನ್ ಮತ್ತು ಮಾರ್ಕ್ ವುಡ್ ಮಾಡಿದ 70 ರನ್ನ ಜೊತೆಯಾಟ ತಂಡ 120ರ ಒಳಗೆ ಆಲ್ಔಟ್ ಆಗುವುದನ್ನು ತಪ್ಪಿಸಿತು.
ಬಲಿಷ್ಠ ಅನುಭವಿ ಬ್ಯಾಟರ್ಗಳನ್ನು ಹೊಂದಿರುವ ಇಂಗ್ಲೆಂಡ್ ಹರಿಣಗಳ ವೇಗದ ದಾಳಿಯ ಮುಂದೆ ಮಂಡಿಯೂರಿತು. 3ನೇ ಓವರ್ನಲ್ಲಿ ಲುಂಗಿ ಎನ್ಗಿಡಿ ಜಾನಿ ಬೈರ್‌ಸ್ಟೋವ್ (10) ವಿಕೆಟ್ ಪಡೆದರು. ನಂತರ 4 ಮತ್ತು 6ನೇ ಓವರ್ನಲ್ಲಿ ಮಾರ್ಕೊ ಜಾನ್ಸೆನ್ ಡೇವಿಡ್ ಮಲನ್ (6), ಜೋ ರೂಟ್ (2) ವಿಕೆಟ್ ಕಿತ್ತರು. ವಿಶ್ವಕಪ್ಗಾಗಿ ನಿವೃತ್ತಿ ಹಿಂಪಡೆದು ತಂಡಕ್ಕೆ ಮರಳಿದ ಬೆನ್ ಸ್ಟೋಕ್ಸ್ 5 ರನ್ಗೆ ವಿಕೆಟ್ ಕೊಟ್ಟರು. 8 ಓವರ್ಗೆ 38 ರನ್ಗೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.
ಬೃಹತ್ ಗುರಿಯನ್ನು ಬೆನ್ನಟ್ಟುವ ಉದ್ದೇಶದಿಂದ ಎಲ್ಲಾ ಆಟಗಾರರು ಬಿರುಸಿನ ಆಟಕ್ಕೆ ಮುಂದಾಗಿ ವಿಕೆಟ್ ಕೊಟ್ಟರು. ಯಾರೂ ಸಹ ವಿಕೆಟ್ ಕಾಯ್ದು ಇನ್ನಿಂಗ್ಸ್ ಕಾಯ್ದುಕೊಳ್ಳಲೇ ಇಲ್ಲ. ತಂಡ 16 ಓವರ್ಗೆ 100 ರನ್ ತಲುಪಿತ್ತು. ಈ ವೇಳೆಗೆ ಹ್ಯಾರಿ ಬ್ರೂಕ್ (17), ಜೋಶ್ ಬಟ್ಲರ್(15), ಡೇವಿಡ್ ವಿಲ್ಲಿ (12), ಆದಿಲ್ ರಶೀದ್ (10) ವಿಕೆಟ್ ಪತನವಾಗಿತ್ತು. ಸೂರ್ಯ ಮುಳುಗದ ನಾಡಿನ ಆಟಗಾರರಿಗೆ ಪಂದ್ಯ ಗೆಲ್ಲುವುದು ಈ ಹಂತಕ್ಕೆ ಕಠಿಣವೇ ಆಗಿತ್ತು. ಮುಂದಿನ ಎಲ್ಲಾ ಐದು ಪಂದ್ಯಗಳನ್ನು ಗೆದ್ದಲ್ಲಿ ರನ್ರೇಟ್ಗೆ ಸಮಸ್ಯೆ ಆಗಬಾರದು ಎಂದು ಕೊನೆಯ ಬ್ಯಾಟರ್ಗಳು ಆದಷ್ಟೂ ರನ್ ಕಲೆಹಾಕಲು ಪ್ರಯತ್ನಿಸಿದರು.
ಗಸ್, ವುಡ್ ವ್ಯರ್ಥ ಜೊತೆಯಾಟ:ಗಸ್ ಅಟ್ಕಿನ್ಸನ್ (35) ಮತ್ತು ಮಾರ್ಕ್ ವುಡ್ (43*) ಕೊನೆಯಲ್ಲಿ ತಂಡಕ್ಕೆ ಬಿರುಸಿನ 70 ರನ್ನ ಜೊತೆಯಾಟ ನೀಡಿದರು . ಇದು ತಂಡದ ಗೆಲುವಿಗೆ ನೆರವಾಗುವುದಿಲ್ಲ ಎಂಬುದು ಉಭಯ ಬ್ಯಾಟರ್ಗಳಿಗೂ ತಿಳಿದಿತ್ತು. ಕಳೆಪೆ ರನ್ರೇಟ್ನಿಂದ ಹೊರ ತರಲು ಸಕಲ ಪ್ರಯತ್ನ ಮಾಡಿದರು. ತಂಡ 170 ರನ್ ಗಳಿಸಿದ್ದಾಗ ಗಸ್ ಅಟ್ಕಿನ್ಸನ್ ವಿಕೆಟ್ ಪತನದೊಂದಿಗೆ ಇಂಗ್ಲೆಂಡ್ 229 ರನ್ನ ಸೋಲನುಭವಿಸಿತು. ವಿಶ್ವಕಪ್ ಲೀಗ್ ಹಂತದಲ್ಲಿ ಮೂರು ಸೋಲು ಕಂಡ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿತ ಕಂಡಿತು.
ಹರಿಣಗಳ ಪರ ಜೆರಾಲ್ಡ್ ಕೊಯೆಟ್ಜಿ 3 ಮತ್ತು ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್ 2 ವಿಕೆಟ್ ಕಬಳಿಸಿದರೆ, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಒಂದೊಂದು ವಿಕೆಟ್ ಪಡೆದರು. 67 ಬಾಲ್ನಲ್ಲಿ 109 ರನ್ನ ಅಮೂಲ್ಯ ಇನ್ನಿಂಗ್ಸ್ ಆಡಿದ ಹೆನ್ರಿಚ್ ಕ್ಲಾಸೆನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:ಸ್ಯಾಂಟ್ನರ್ ಐಪಿಎಲ್ ಅನುಭವ ಧರ್ಮಶಾಲಾದಲ್ಲಿ ತಂಡಕ್ಕೆ ನೆರವಾಗಲಿದೆ: ಟಾಮ್ ಲ್ಯಾಥಮ್