ಅಹಮದಾಬಾದ್ (ಗುಜರಾತ್):ನಾಳೆ ಗುಜರಾತ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ಸೆಣಸಾಟದಿಂದ ವಿಶ್ವಕಪ್ ಕ್ರಿಕೆಟ್‌ಗೆ ಚಾಲನೆ ಸಿಗಲಿದೆ. 2019ರ ವಿಶ್ವಕಪ್ ಗೆದ್ದ ಆಂಗ್ಲರ ಪಡೆ ಬಲಿಷ್ಠವಾಗಿದೆ. ಹಾಗೆಯೇ ಅದನ್ನೆದುರಿಸಲು ಕಿವೀಸ್ ಪಡೆ ಸಕಲ ರೀತಿಯಲ್ಲೂ ಸನ್ನದ್ಧವಾಗಿದೆ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ನಾಯಕ ವಿಲಿಯಮ್ಸನ್ ಕಿವೀಸ್ ಬಲ. ಅತ್ತ ನಿವೃತ್ತಿಯನ್ನು ವಿಶ್ವಕಪ್ಗಾಗಿ ವಾಪಸ್ ಪಡೆದ ಸ್ಟೋಕ್ಸ್ ಅವರಿಗೆ ಗಾಯವಾಗಿರುವುದು ಆಂಗ್ಲರಿಗೆ ನೆಗೆಟಿವ್ ಆಗಿದೆ. ಈ ಎಲ್ಲದರ ನಡುವೆ ಉದ್ಘಾಟನಾ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ.
2015 ಮತ್ತು 2019ರಲ್ಲಿ ರನ್ನರ್ ಅಪ್ ಆಗಿದ್ದ ಕಿವೀಸ್ ತಂಡ ಈ ಬಾರಿ ವಿಶ್ವಕಪ್ ಗೆಲ್ಲಲೇ ಬೇಕೆಂಬ ಹಟದಲ್ಲಿದೆ. ಅದೇ ರೀತಿ ತನ್ನಲ್ಲಿಯೇ ವಿಶ್ವಕಪ್ ಟ್ರೋಫಿ ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿ ಇಂಗ್ಲೆಂಡ್ ಮೈದಾನಕ್ಕಿಳಿಯಲಿದೆ. ಮಹಾ ಸಮರದ ಮೊದಲ ಕದನವನ್ನು ಜಯದಿಂದ ಆರಂಭಿಸಲು ಉಭಯ ತಂಡಗಳು ಲೆಕ್ಕಾಚಾರದಲ್ಲಿಲೆ. 2019 ವಿಶ್ವಕಪ್ ಸೋಲಿನ ಸೇಡು ತೀರಿಸಲು ಕಿವೀಸ್ ಉತ್ಸಾಹದಲ್ಲಿದೆ.
ಮೊದಲ ಪಂದ್ಯಕ್ಕೆ ಸ್ಟೋಕ್ಸ್ ಅಲಭ್ಯ: ಏಕದಿನ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಬೆನ್ ಸ್ಟೋಕ್ಸ್ ಅವರನ್ನು ವಿಶ್ವಕಪ್ ಉದ್ದೇಶದಿಂದ ತಂಡಕ್ಕೆ ಮತ್ತೆ ಕರೆಯಲಾಗಿತ್ತು. 2019 ವಿಶ್ವಕಪ್ ಗೆಲುವಿನಲ್ಲಿ ಆಲ್ರೌಂಡರ್ ಆಗಿ ಪ್ರಮುಖ ಪಾತ್ರವನ್ನೂ ವಹಿಸಿದ್ದರು. ಇಂಗ್ಲೆಂಡ್ನ ದುರಾದೃಷ್ಟಕ್ಕೆ ಗಾಯಗೊಂಡಿರುವ ಸ್ಟೋಕ್ಸ್ ನಾಳಿನ ಪಂದ್ಯಕ್ಕೆ ಅಲಭ್ಯರು. ಸ್ಟೋಕ್ಸ್ ಅಭ್ಯಾಸದ ವೇಳೆ ಸೊಂಟದ ಗಾಯದ ಸಮಸ್ಯೆಗೆ ತುತ್ತಾಗಿದ್ದಾರೆ. ಹಾಗಾಗಿ ಆರಂಭಿಕ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ ಎಂದು ಅಹಮದಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಬಟ್ಲರ್ ಸ್ಪಷ್ಟಪಡಿಸಿದ್ದಾರೆ.
ಸ್ಟೋಕ್ಸ್ ಹೊರತಾಗಿಯೂ ಆಂಗ್ಲರು ಬಲಿಷ್ಠ: ಮೆಕಲಮ್ ಕೋಚ್ ಆಗಿ ಬಂದ ನಂತರ ಇಂಗ್ಲೆಂಡ್ ತಂಡ ಬ್ಯಾಟಿಂಗ್ ವೇಗ ಹೆಚ್ಚಾಗಿದೆ. ಜಾನಿ ಬೈರ್ಸ್ಟೋ ಮತ್ತು ಡೇವಿಡ್ ಮಲನ್ ಸ್ಫೋಟಕ ಆರಂಭವನ್ನು ನೀಡಿದರೆ ಜೋ ರೂಟ್, ಹ್ಯಾರಿ ಬ್ರೂಕ್, ಬಟ್ಲರ್ ಮಧ್ಯಮದ ಬಲವಾಗಿದ್ದಾರೆ. ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಮೊಯಿನ್ ಅಲಿ ಬ್ಯಾಟಿಂಗ್ ಆಲ್ರೌಂಡರ್ಗಳಾಗಿ ತಂಡಕ್ಕೆ ಕೊಡುಗೆ ನೀಡುತ್ತಾರೆ. ಸ್ಯಾಮ್ ಕರನ್, ಕ್ರಿಸ್ವೋಕ್ಸ್, ಮಾರ್ಕ್ ವುಡ್ ವೇಗದ ಬೌಲಿಂಗ್ನಲ್ಲಿ ಕಿವೀಸ್ಗೆ ಕಂಟಕವಾದರೆ, ಲಿವಿಂಗ್ಸ್ಟೋನ್ ಮತ್ತು ಮೊಯಿನ್ ಅಲಿ ಸಹಕಾರ ನೀಡಲಿದ್ದಾರೆ.
ಕಿವೀಸ್ ವೇಗಿ ಸೌಥಿ ಅಲಭ್ಯ:ನ್ಯೂಜಿಲೆಂಡ್ನ ಪ್ರಮುಖ ವೇಗಿ ಟಿಮ್ ಸೌಥಿ ನಾಳಿನ ಪಂದ್ಯದಲ್ಲಿ ಆಡುತ್ತಿಲ್ಲ. ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಸೌಥಿ ಗಾಯಕ್ಕೆ ತುತ್ತಾಗಿದ್ದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಇನ್ನೂ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಅಭ್ಯಾಸ ಪಂದ್ಯದ ವೇಳೆ ಗಾಯಕ್ಕೆ ತುತ್ತಾದ ನಾಯಕ ವಿಲಿಯಮ್ಸನ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ನಾಯಕ ಸಂಪೂರ್ಣ ಚೇತರಿಸಿಕೊಳ್ಳದಿದ್ದರೂ ಮೈದಾನದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.