ಅಹಮದಾಬಾದ್ (ಗುಜರಾತ್): ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಶೇನ್ ಮತ್ತು ಕ್ಯಾಮೆರಾನ್ ಗ್ರೀನ್ ಅವರ ಇನ್ನಿಂಗ್ಸ್ ಬಲದಿಂದ ಕಾಂಗರೂ ಪಡೆ ಆಂಗ್ಲರ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಿಗದಿತ ಓವರ್ ಅಂತ್ಯಕ್ಕೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 286 ರನ್ಗಳನ್ನು ಕಲೆಹಾಕಿದೆ. 2023 ವಿಶ್ವಕಪ್ನಲ್ಲಿ ಕಳಪೆ ಪ್ರದರ್ಶನದಿಂದ ಅಂಕಪಟ್ಟಿಯಲ್ಲಿ ತಳಮಟ್ಟಕ್ಕೆ ತಲುಪಿರುವ ಆಂಗ್ಲರು 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅವಕಾಶ ಪಡೆಯುವ ಉದ್ದೇಶದಿಂದ ಈ ಪಂದ್ಯದ ಜೊತೆ ಉಳಿದ ಪಂದ್ಯಗಳನ್ನು ಗೆಲ್ಲಬೇಕಿದೆ. ಬ್ಯಾಟಿಂಗ್ನಲ್ಲಿ ಸತತವಾಗಿ ಕೆಟ್ಟ ಪ್ರದರ್ಶನ ನೀಡುತ್ತಿರುವ ಆಂಗ್ಲರಿಗೆ 287 ದೊಡ್ಡ ಮೊತ್ತವೇ ಆಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಸ್ಟ್ರೇಲಿಯಾ ಉತ್ತಮ ಆರಂಭವನ್ನೇನು ಪಡೆಯಲಿಲ್ಲ. 6ನೇ ಓವರ್ಗೆ 38 ರನ್ಗೆ ಆಸಿಸ್ ತನ್ನ ಆರಂಭಿಕರಾದ ಡೇವಿಡ್ ವಾರ್ನರ್ (15), ಟ್ರಾವಿಸ್ ಹೆಡ್ (11) ಅವರನ್ನು ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್ಗೆ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲ್ಯಾಬುಶೇನ್ 75 ರನ್ನ ಪಾಲುದಾರಿಕೆಯನ್ನು ಮಾಡಿ ತಂಡಕ್ಕೆ ಆಸರೆ ಆದರು. ಮಾಜಿ ನಾಯಕ ಸ್ಮಿತ್ (44) ಅರ್ಧಶತಕ ಮಾಡುವಲ್ಲಿ ಎಡವಿದರು. ಅವರ ಬೆನ್ನಲ್ಲೇ ಜೋಶ್ ಇಂಗ್ಲಿಸ್ (3) ಸಹ ವಿಕೆಟ್ ಕಳೆದುಕೊಂಡರು.
ನಾಲ್ಕನೆ ವಿಕೆಟ್ಗೆ ಒಂದಾದ ಮಾರ್ನಸ್ ಲ್ಯಾಬುಶೇನ್ ಮತ್ತು ಕ್ಯಾಮೆರಾನ್ ಗ್ರೀನ್ 61 ರನ್ಗಳ ಜೊತೆಯಾಟವಾಡಿದರು. 71ರನ್ ಬಾರಿಸಿದ ಮಾರ್ನಸ್ ಲ್ಯಾಬುಶೇನ್ ಮಾರ್ಕ್ ವುಡ್ಗೆ ವಿಕೆಟ್ ಒಪ್ಪಿಸಿದರು. ನಂತರ ಕ್ಯಾಮೆರಾನ್ ಗ್ರೀನ್ (47), ಮಾರ್ಕಸ್ ಸ್ಟೊಯ್ನಿಸ್ (35), ಪ್ಯಾಟ್ ಕಮ್ಮಿನ್ಸ್ (10), ಮಿಚೆಲ್ ಸ್ಟಾರ್ಕ್(10), ಆಡಮ್ ಝಂಪಾ (29) ವಿಕೆಟ್ ಒಪ್ಪಿಸಿದರು.