ನವದೆಹಲಿ:ಲಂಕಾಗೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಅದೃಷ್ಟವಶಾತ್ ಸೆಮೀಸ್ಗೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಅವಕಾಶ ಇತ್ತು. ಆದರೆ, ಬಾಂಗ್ಲಾ ಟೈಗರ್ಸ್ ಸಿಂಹಳೀಯರ ಈ ಕನಸನ್ನು ಭಗ್ನ ಮಾಡಿದ್ದಾರೆ. ಶ್ರೀಲಂಕಾ ನೀಡಿದ್ದ 279 ರನ್ಗಳ ಗುರಿಯನ್ನು ಬಾಂಗ್ಲಾದೇಶ 41.1 ಓವರ್ಗೆ 3 ವಿಕೆಟ್ ಉಳಿಸಿಕೊಂಡು ಜಯ ದಾಖಲಿಸಿದೆ.
ವಿಶ್ವಕಪ್ನಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಶ್ರೀಲಂಕಾವನ್ನು ಮಣಿಸಿ ಅವರನ್ನು ವಿಶ್ವಕಪ್ ಸೆಮೀಸ್ ರೇಸ್ನಿಂದ ಹೊರಕ್ಕೆ ತಂದಿದೆ. ಇದರಿಂದ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಅಲಂಕರಿಸಿದ್ದು, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಬಾಂಗ್ಲಾ ಬೌಲರ್ಗಳ ಮುಂದೆ ಬ್ಯಾಟಿಂಗ್ ಪಿಚ್ನಲ್ಲಿ ಕಷ್ಟಪಟ್ಟು ಆಡಿತ್ತು. ಚರಿತ್ ಅಸಲಂಕಾ ಶತಕ ಮತ್ತು ಪಾತುಮ್ ನಿಸ್ಸಾಂಕ (41), ಸದೀರ ಸಮರವಿಕ್ರಮ (41) ಇನ್ನಿಂಗ್ಸ್ ಬಲದಿಂದ ತಂಡ 49.3 ಓವರ್ಗೆ ಆಲ್ಔಟ್ಗೆ ಶರಣಾಗಿ 280 ರನ್ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ಮೊದಲ ವಿಕೆಟ್ನ್ನು ಬೇಗ ಕಳೆದುಕೊಂಡರೂ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ ಇನ್ನಿಂಗ್ಸ್ ಬಲದಿಂದ 3 ವಿಕೆಟ್ಗಳ ಜಯ ದಾಖಲಿಸಿತ್ತು.
ತಂಜಿದ್ ಹಸನ್ ದಿಲ್ಶನ್ ಮಧುಶಂಕ ಬೌಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಇದರಿಂದ 17 ರನ್ಗೆ ಬಾಂಗ್ಲಾ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (23) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ, ಮೂರನೇ ವಿಕೆಟ್ಗೆ ಒಂದಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ 169 ರನ್ ಜೊತೆಯಾಟ ನೀಡಿದ್ದರು. ಇವರ ಪಾಲುದಾರಿಕೆಯಿಂದ ತಂಡ ಗೆಲುವು ಹೆಚ್ಚು ಕಡಿಮೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂತು.