ಲಖನೌ (ಉತ್ತರ ಪ್ರದೇಶ): ಸತತ ಎರಡು ಸೋಲು ಕಂಡು ಏಕದಿನ ವಿಶ್ವಕಪ್ ಕ್ರಿಕೆಟ್ ಅಂಕಪಟ್ಟಿಯ ತಳ ತಲುಪಿದ್ದ ಆಸ್ಟ್ರೇಲಿಯಾ ಗೆಲುವಿನ ಹಾದಿಗೆ ಮರಳಿದೆ. ಶ್ರೀಲಂಕಾ ವಿರುದ್ಧ ಮಿಚೆಲ್ ಮಾರ್ಷ್ ಮತ್ತು ಜೋಶ್ ಇಂಗ್ಲಿಸ್ ಅವರ ಅರ್ಧಶತಕದಾಟದ ನೆರವಿನಿಂದ 210 ರನ್ ಗುರಿಯನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಲೀಗ್ ಹಂತದಲ್ಲಿ ಸತತ ಮೂರು ಸೋಲು ಕಂಡಿರುವ ಶ್ರೀಲಂಕಾಕ್ಕೆ ಪ್ಲೇ ಆಫ್ ಹಾದಿ ಕಠಿಣವಾಗಿದೆ. ಅಲ್ಲದೇ ವಿಶ್ವಕಪ್ನಲ್ಲಿ ಅತಿ ಹೆಚ್ಚು (42) ಪಂದ್ಯಗಳನ್ನು ಸೋತ ತಂಡ ಎಂಬ ಕೆಟ್ಟ ದಾಖಲೆಯನ್ನೂ ಸಿಂಹಳೀಯರು ಮಾಡಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ಪಾತುಮ್ ನಿಸ್ಸಾಂಕ ಮತ್ತು ಕುಸಾಲ್ ಪೆರೇರಾ ಅವರ ಶತಕದ ಜೊತೆಯಾಟದ ನೆರವಿನಿಂದ 209 ರನ್ ಕಲೆಹಾಕಿತ್ತು. ಈ ಸ್ಕೋರ್ ಬೆನ್ನತ್ತಿದ ಆಸ್ಟ್ರೇಲಿಯಾ ಉತ್ತಮ ಆರಂಭ ಪಡೆಯಲಿಲ್ಲ. ಅನುಭವಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಬೇಗ ವಿಕೆಟ್ ಕಳೆದುಕೊಂಡರು. ಇದರಿಂದ ತಂಡ ಆತಂಕಕ್ಕೊಳಗಾದರೂ ಮಧ್ಯಮ ಕ್ರಮಾಂಕ ಆಸರೆ ಆಯಿತು. ಇಲ್ಲದಿದ್ದಲ್ಲಿ ಅಫ್ಘಾನಿಸ್ತಾನದ ಫಲಿತಾಂಶದಂತೆ ಲಂಕಾ ಕೂಡಾ ಐದು ಬಾರಿ ಚಾಂಪಿಯನ್ ತಂಡವನ್ನು ಮಣಿಸುತ್ತಿತ್ತು.
ವಿಕೆಟ್ ಕೈಚೆಲ್ಲಿದ ಅನುಭವಿಗಳು: 210 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಕಾಂಗರೂ ಪಡೆಗೆ ದಿಲ್ಶನ್ ಮಧುಶಂಕ ಕಾಡಿದರು. ಗೆಲ್ಲಲೇ ಬೇಕಾದ ಒತ್ತಡದಲ್ಲಿ ಆಸ್ಟ್ರೇಲಿಯಾ 4ನೇ ಓವರ್ನಲ್ಲಿ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು. 11 ರನ್ ಗಳಿಸಿದ ಡೇವಿಡ್ ವಾರ್ನರ್ 3.1 ನೇ ಬಾಲ್ಗೆ ಔಟಾದರೆ, ಮಾಜಿ ನಾಯಕ ಸ್ಟೀವ್ ಸ್ಮಿತ್ ಶೂನ್ಯಕ್ಕೆ ವಿಕೆಟ್ ಕೊಟ್ಟರು.
ಎರಡು ವಿಕೆಟ್ ಉರುಳಿದರೂ ಇನ್ನೋರ್ವ ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಲಂಕಾ ಬೌಲರ್ಗಳ ವಿರುದ್ಧ ಹೋರಾಟ ಮುಂದುವರೆಸಿದರು. ಅವರ ಜೊತೆಯಲ್ಲಿ ಮಾರ್ನಸ್ ಲಬುಶೇನ್ ಜೊತೆಯಾಟ ಕಟ್ಟಿದರು. ಈ ಜೋಡಿ ಮೂರನೇ ವಿಕೆಟ್ಗೆ 57 ರನ್ಗಳ ಪಾಲುದಾರಿಕೆ ಮಾಡಿತು. 51 ಬಾಲ್ನಲ್ಲಿ 9 ಬೌಂಡರಿಸಹಿತ 52 ರನ್ ಗಳಿಸಿದ ಮಾರ್ಷ್ ರನ್ ಔಟ್ಗೆ ಬಲಿಯಾದರು.