ಬೆಂಗಳೂರು:ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸುಧಾರಿತ ಪ್ರದರ್ಶನ ತೋರಿದ ಆಸ್ಟ್ರೇಲಿಯಾ ತಂಡ ಪಾಕಿಸ್ತಾನವನ್ನು 62 ರನ್ಗಳ ಅಂತರದಿಂದ ಮಣಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಎರಡನೇ ಇನ್ನಿಂಗ್ಸ್ನಲ್ಲಿ ಆ್ಯಡಂ ಝಂಪಾ ಪಾಕಿಸ್ತಾನಿ ಬ್ಯಾಟರ್ಗಳಿಗೆ ಕಂಠಕವಾದರು. ಪಾಕ್ ಪರ ಆರಂಭಿಕ ಜೋಡಿಯ ದೊಡ್ಡ ಜೊತೆಯಾಟದ ಹೊರತಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮೂಡಿಬರಲಿಲ್ಲ. ಇದರಿಂದ 45.3 ಓವರ್ಗೆ 305ಕ್ಕೆ ಸರ್ವಪತನ ಕಂಡು ಸೋಲುಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ (163) ಮತ್ತು ಮಿಚೆಲ್ ಮಾರ್ಷ್ (121) ಅವರ ಅಮೋಘ ಶತಕದಗಳ ನೆರವಿನಿಂದ 367 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತಾದರೂ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಜೊತೆಯಾಟ ಆಡದ ಕಾರಣ ಸೋಲನುಭವಿಸಬೇಕಾಯಿತು.
ಆರಂಭಿಕರ ಶತಕದ ಜೊತೆಯಾಟ : ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್-ಉಲ್-ಹಕ್ ಪಾಕಿಸ್ತಾನಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಬೆಂಗಳೂರಿನ ಮೈದಾನದಲ್ಲಿ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್ ಬಾರಿಸಿದರು. ಮೊದಲ ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ನಷ್ಟವಿಲ್ಲದೇ 59 ರನ್ ಕಲೆಹಾಕಿದರು. ಈ ಜೋಡಿ ತಲಾ ಅರ್ಧಶತಕ ಗಳಿಸಿ ಸಂಭ್ರಮಿಸಿತು. 64 ರನ್ ಗಳಿಸಿದ್ದ ಅಬ್ದುಲ್ಲಾ ಶಫೀಕ್ ಸ್ಟೋಯ್ನಿಸ್ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರಿಂದ 134 ರನ್ ಜೊತೆಯಾಟ ಅಂತ್ಯವಾಯಿತು. ಶಫೀಕ್ ಬೆನ್ನಲ್ಲೇ ಇಮಾಮ್ ಉಲ್ ಹಕ್ ಸಹ 70 ರನ್ಗೆ ಔಟಾದರು.