ಧರ್ಮಶಾಲಾ (ಹಿಮಾಚಲ ಪ್ರದೇಶ): ವಿಶ್ವಕಪ್ನಲ್ಲಿ ಸತತ ಒಂದು ಬದಿಯ ಫಲಿತಾಂಶದ ಪಂದ್ಯಗಳು ಬರುತ್ತಿವೆ. ರೋಚಕತೆ ಇಲ್ಲ ಎಂಬ ಮಾತುಗಳು ಈವರೆಗೆ ಕೇಳಿಬರುತ್ತಿದ್ದವು. ಆದರೆ ಧರ್ಮಶಾಲಾ ಮೈದಾನದಲ್ಲಿ ಇಂದು ನಡೆದ ಪಂದ್ಯ ರೋಚಕ ಅಂತ್ಯವನ್ನು ಕಂಡಿತು. ಆಸ್ಟ್ರೇಲಿಯಾ ಕೊನೆಯಲ್ಲಿ ನಡೆಸಿದ ಬಿಗಿಯಾದ ಕ್ಷೇತ್ರ ರಕ್ಷಣೆಯ ನೆರವಿನಿಂದ 5 ರನ್ನಿಂದ ರೋಚಕ ಜಯ ಸಾಧಿಸಿತು. ಆಸಿಸ್ ನೀಡಿದ್ದ 388 ರನ್ ಗುರಿಯನ್ನು ಬೆನ್ನತ್ತಿದ ಕಿವೀಸ್ ಪಡೆ 50 ಓವರ್ಗೆ 9 ವಿಕೆಟ್ ಕಳೆದುಕೊಂಡು 383 ರನ್ ಗಳಿಸಲಷ್ಟೇ ಶಕ್ತವಾಯಿತು.
ನಿನ್ನೆ (ಶುಕ್ರವಾರ) ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ರೋಚಕ ಅಂತ್ಯ ಕಂಡ ನಂತರ ಇಂದು ಮತ್ತೊಂದು ಅಂತಹ ಬಿಗಿಯಾದ ಫಲಿತಾಂಶ ಹೊರಬಿತ್ತು. ಆರಂಭಿಕರಾದ ವಾರ್ನರ್ ಮತ್ತು ಹೆಡ್ ಅವರ 175 ರನ್ ಜತೆಯಾಟದ ನೆರವಿನಿಂದ ನ್ಯೂಜಿಲೆಂಡ್ಗೆ ಆಸ್ಟ್ರೇಲಿಯಾ 388 ರನ್ಗಳ ಬೃಹತ್ ಗುರಿಯನ್ನು ನೀಡಿತ್ತು. ಈ ಬೃಹತ್ ಮೊತ್ತವನ್ನು ಹೆಚ್ಚು ಕಡಿಮೆ ನ್ಯೂಜಿಲೆಂಡ್ ಯಶಸ್ವಿಯಾಗಿ ಸಾಧಿಸುವಂತೆ ಕಂಡು ಬಂತು. ರಚಿನ್ ರವೀಂದ್ರ ಶತಕ ಮತ್ತು ಡೆರಿಯಲ್ ಮಿಚೆಲ್, ಜೇಮ್ಸ್ ನೀಶಮ್ ಅರ್ಧಶತಕದ ನೆರವಿನಿಂದ ತಂಡ ಗೆಲುವಿನ ಸನಿಹಕ್ಕೆ ಬಂದಿತ್ತು. ಆದರೆ ಕೊನೆಯ ಎರಡು ಓವರ್ನಲ್ಲಿ ಆಸ್ಟ್ರೇಲಿಯಾ ತೋರಿದ ಕ್ಷೇತ್ರ ರಕ್ಷಣೆ ಮತ್ತು ಬೌಲಿಂಗ್ನಿಂದ ಮೊತ್ತವನ್ನು ರಕ್ಷಿಸಿಕೊಂಡಿತು.
ಕೊನೆಯ ಎರಡು ರೋಚಕ ಓವರ್: 6ನೇ ವಿಕೆಟ್ಗೆ ಬಂದ ಜೇಮ್ಸ್ ನೀಶಮ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. 48ನೇ ಓವರ್ನಲ್ಲಿ 11 ರನ್ ತೆಗೆದುಕೊಂಡರು. ಇದರಿಂದ 12 ಬಾಲ್ಗೆ 32 ರನ್ನ ಅವಶ್ಯಕತೆ ಇತ್ತು. 49ನೇ ಓವರ್ನಲ್ಲಿ ನೀಶಮ್ 13 ರನ್ ಪಡೆದರು. ಇದರಿಂದ ಕೊನೆಯ ಓವರ್ನಲ್ಲಿ 19 ರನ್ ಅವಶ್ಯಕತೆ ಇತ್ತು. ಕೊನೆಯ ಓವರ್ನಲ್ಲಿ ಸ್ಟಾರ್ಕ್ ಮೊದಲ ಬಾಲ್ನಲ್ಲಿ ಬೋಲ್ಟ್ 1 ರನ್ ತೆಗೆದುಕೊಂಡು ನೀಶಮ್ಗೆ ಕ್ರೀಸ್ ಬಿಟ್ಟುಕೊಟ್ಟರು. ಎರಡನೇ ಬಾಲ್ನಲ್ಲಿ ಸ್ಟಾರ್ಕ್ ವೈಡ್ ಮತ್ತು ಬೌಂಡರಿಯಿಂದಾಗಿ ಐದು ರನ್ ಬಿಟ್ಟುಕೊಟ್ಟರು.