ನವದೆಹಲಿ: ಡೇವಿಡ್ ವಾರ್ನರ್, ಮ್ಯಾಕ್ಸ್ ವೆಲ್ ಅಬ್ಬರದ ಶತಕ ಮತ್ತು ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಆಸ್ಟ್ರೇಲಿಯಾ ಬ್ಯಾಟಿಂಗ್ ಸ್ನೇಹಿ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ದೊಡ್ಡ ಮೊತ್ತವನ್ನು ಒಗ್ಗೂಡಿಸುವ ಲೆಕ್ಕಾಚಾರದಲ್ಲೇ ಮೈದಾನಕ್ಕಿಳಿದಂತಿತ್ತು. ಏಕೆಂದರೆ ಮೊದಲ ಎರಡು ಪಂದ್ಯವನ್ನು ಸೋತಿರುವ ಆಸ್ಟ್ರೇಲಿಯಾಕ್ಕೆ ಪ್ಲೇ ಆಫ್ ಪ್ರವೇಶಕ್ಕೆ ರನ್ರೇಟ್ ತೊಡಕಾಗದಂತೆ ಮಾಡಲು ನೆದರ್ಲೆಂಡ್ಸ್ ವಿರುದ್ಧ ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿ ತಂಡ ಇದ್ದಂತೆ ಕಾಣುತ್ತಿತ್ತು.
ಈ ಲೆಕ್ಕಾಚಾರದಲ್ಲಿ ಮೈದಾನಕ್ಕಿಳಿದ ಕಾಂಗರೂ ಪಡೆಗೆ ಆರಂಭಿಕ ಆಘಾತವನ್ನು ಡಚ್ಚರು ನೀಡಿದರು. ಪಾಕಿಸ್ತಾನದ ವಿರುದ್ಧ ಕಳೆದ ಪಂದ್ಯದಲ್ಲಿ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ 259 ರನ್ನ ಬೃಹತ್ ಜತೆಯಾಟ ಮಾಡಿದ್ದರು. ಆದರೆ ಡಚ್ಚರು 9 ರನ್ ಗಳಿಸಿದ್ದ ಮಾರ್ಷ್ ವಿಕೆಟ್ ಪಡೆಯುವ ಮೂಲಕ ಮತ್ತೊಂದು ದೊಡ್ಡ ಪಾಲುದಾರಿಕೆಗೆ ಬ್ರೇಕ್ ಹಾಕಿದರು. ಆದರೆ ಎರಡನೇ ವಿಕೆಟ್ಗೆ ಆಸ್ಟ್ರೇಲಿಯನ್ ಬ್ಯಾಟರ್ಗಳು ಜತೆಯಾಟವನ್ನು ಹಂಚಿಕೊಂಡರು. ತಂಡ ಅನುಭವಿ ಬ್ಯಾಟರ್ಗಳಾದ ಡೇವಿಡ್ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ 132 ರನ್ ಜೊತೆಯಾಗಿ ರನ್ ಕಲೆಹಾಕಿದರು. ಇಬ್ಬರು ಆಟಗಾರರು ಅರ್ಧಶತಕ ಪೂರೈಸಿಕೊಂಡರು.
ಶತಕದ ಲೆಕ್ಕಾಚಾದಲ್ಲಿದ್ದ ಆಸಿಸ್ ಮಾಜಿ ನಾಯಕ ಸ್ಮಿತ್ 71 ರನ್ ಕ್ಯಾಚ್ ಕೊಟ್ಟು ಪೆವಿಲಿಯನ್ ದಾರಿ ಹಿಡಿದರು. ಅವರ ನಂತರ ಬಂದ ಮಾರ್ನಸ್ ಲ್ಯಾಬುಶೇನ್ ವಾರ್ನರ್ ಜೊತೆ ಮತ್ತೊಂದು ಪಾಲುದಾರಿಕೆಯನ್ನು ಮಾಡಿದರು. ಈ ಜೋಡಿ 3ನೇ ವಿಕೆಟ್ಗೆ 84 ರನ್ ಸೇರಿಸಿತು. ಇದರಿಂದ ತಂಡ 250 ಗಡಿ ಸಮೀಪಿಸಿತು. ಈ ವೇಳೆ ಮಾರ್ನಸ್ (62) ವಿಕೆಟ್ ಕೊಟ್ಟರೆ, ಅವರ ಬೆನ್ನಲ್ಲೇ ಬಂದ ಜೋಶ್ ಇಂಗ್ಲಿಸ್ (14) ವಿಶ್ವಕಪ್ನಲ್ಲಿ ಮತ್ತೆ ವಿಫಲರಾದರು.