ಮುಂಬೈ (ಮಹಾರಾಷ್ಟ್ರ):ಪ್ರಸ್ತುತ ವಿಶ್ವಕಪ್ನಲ್ಲಿ 4 ಪಂದ್ಯಗಳನ್ನು ಗೆದ್ದು ಸೆಮೀಸ್ ಪ್ರವೇಶಕ್ಕೆ ಅವಕಾಶಗಳನ್ನು ಉಳಿಸಿಕೊಂಡಿರುವ ಅಫ್ಫಾನಿಸ್ತಾನ ಇಲ್ಲಿನ ಐಕಾನಿಕ್ ವಾಂಖೆಡೆ ಕ್ರಿಡಾಂಗಣದಲ್ಲಿ ಐದು ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾವನ್ನು ಎದುರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಇಬ್ರಾಹಿಂ ಜದ್ರಾನ್ ಅವರ ಅಜೇಯ ಶತಕದ ಆಟದ ನೆರವಿನಿಂದ ನಿಗದಿತ ಓವರ್ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 291 ರನ್ಗಳನ್ನು ಕಲೆ ಹಾಕಿದೆ.
2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡ ನಿರೀಕ್ಷೆಗೂ ಮೀರಿದ ಪ್ರದರ್ಶನ ಮತ್ತು ಫಲಿತಾಂಶವನ್ನು ನೀಡುತ್ತಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡ ಅಫ್ಘಾನ್ ನಂತರ ಪಾಕಿಸ್ತಾನ, ಶ್ರೀಲಂಕಾ ಮತ್ತು ನೆದರ್ಲೆಂಡ್ಸ್ನ್ನು ಮಣಿಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನವನ್ನು ಉಳಿಸಿಕೊಂಡು, ಸೆಮೀಸ್ ಅವಕಾಶವನ್ನು ಎದುರು ನೋಡುತ್ತಿದೆ. ಕಳೆದ (2019) ವಿಶ್ವಕಪ್ನಲ್ಲಿ ಒಂದೂ ಗೆಲುವು ಕಾಣದ ತಂಡ ಈ ಬಾರಿ ಯಶಸ್ವಿ ಪ್ರದರ್ಶನ ನೀಡುತ್ತಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ಗೆ ಇಳಿದ ಅಫ್ಘನ್ಗೆ ಮೊದಲ ವಿಕೆಟ್ಗೆ ದೊಡ್ಡ ಜೊತೆಯಾಟ ಸಿಗಲಿಲ್ಲ. ವಿಶ್ವಕಪ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ರಹಮಾನುಲ್ಲಾ ಗುರ್ಬಾಜ್ ಇತ್ತೀಚಿನ ಪಂದ್ಯಗಳಲ್ಲಿ ವೈಫಲ್ಯತೆ ಎದುರಿಸುತ್ತಿದ್ದಾರೆ. ಆಸ್ಟ್ರೇಲಿಯಾ ವಿರುದ್ಧವೂ ರಹಮಾನುಲ್ಲಾ ಗುರ್ಬಾಜ್ (21) ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎಡವಿದರು.
ಇಬ್ರಾಹಿಂ ಜದ್ರಾನ್ ಏಕಾಂಗಿ ಪ್ರದರ್ಶನ: ಇನ್ನೋರ್ವ ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ ಕಾಂಗರೂ ಪಡೆಯ ಬೌಲರ್ಗಳ ದಾಳಿಯ ವಿರುದ್ಧ ಸೆಟೆದುನಿಂತು ಆಡಿದರು. ಎರಡನೇ ವಿಕೆಟ್ಗೆ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ 83 ರನ್ಗಳ ಪಾಲುದಾರಿಕೆ ಮಾಡಿದರು. ರಹಮತ್ ಶಾ (30), ಹಶ್ಮತುಲ್ಲಾ ಶಾಹಿದಿ(26), ಅಜ್ಮತುಲ್ಲಾ ಒಮರ್ಜಾಯ್ (22), ಮೊಹಮ್ಮದ್ ನಬಿ (12) ಇವರೊಂದಿಗೆ ಪಾಲುದಾರಿಕೆಯನ್ನು ಹಂಚಿಕೊಂಡರು. ಇವರೆಲ್ಲರ ಜೊತೆ ಆಡಿದ ಇಬ್ರಾಹಿಂ ಜದ್ರಾನ್ ತಮ್ಮ ಶತಕವನ್ನು ಪೂರೈಸಿಕೊಂಡರು. ಕೊನೆಯ 5 ಓವರ್ನಲ್ಲಿ ರಶೀದ್ ಖಾನ್ ಮತ್ತು ಇಬ್ರಾಹಿಂ ಜದ್ರಾನ್ ಸೇರಿಕೊಂಡು 58 ರನ್ಗಳ ಪಾಲುದಾರಿಕೆ ಮಾಡಿದರು. ಇದರಿಂದ ತಂಡ 5 ವಿಕೆಟ್ ಕಳೆದುಕೊಂಡು 291 ರನ್ಗಳಿಸಿತು.
ಇನ್ನಿಂಗ್ಸ್ನಲ್ಲಿ ಇಬ್ರಾಹಿಂ ಜದ್ರಾನ್ 143 ಬಾಲ್ ಎದುರಿಸಿ 8 ಬೌಂಡರಿ, 3 ಸಿಕ್ಸ್ನಿಂದ ಅಜೇಯ 129 ರನ್ ಕಲೆಹಾಕಿದರು. ಅಲ್ಲದೇ ಒಂದೆಡೆ ವಿಕೆಟ್ ಪತನ ಆಗುತ್ತಿದ್ದಾಗ ಏಕಾಂಗಿಯಾಗಿ ಎಲ್ಲರ ಜೊತೆ ನಿಧಾನ ಗತಿಯಲ್ಲಿ ಬ್ಯಾಟಿಂಗ್ ಮಾಡಿ ತಂಡಕ್ಕೆ ಆಸರೆ ಆದರು. 46ನೇ ಓವರ್ ಬಂದ ಆಲ್ರೌಂಡರ್ ರಶೀದ್ ಖಾನ್ ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದರು. 18 ಬಾಲ್ ಆಡಿದ ಅವರು 3 ಸಿಕ್ಸ್, 2 ಬೌಂಡರಿ ಸಹಾಯದಿಂದ 35 ರನ್ ಕಲೆಹಾಕಿದರು.
ಆಸ್ಟ್ರೇಲಿಯಾ ಪರ 7 ಜನ ಬೌಲರ್ಗಳು ಆಡಿದರು, ಅಫ್ಘಾನ್ ಬ್ಯಾಟರ್ಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ಜೋಶ್ ಹ್ಯಾಜಲ್‌ವುಡ್ 2 ವಿಕೆಟ್ ಮತ್ತು ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
ಇದನ್ನೂ ಓದಿ:ಭಾರತದ ಎದುರು ರಚಿನ್ ವಿಶ್ವಕಪ್ ಫೈನಲ್ನಲ್ಲಿ ಆಡುವುದನ್ನು ನೋಡಲು ಬಯಸುತ್ತೇನೆ: ಅಜ್ಜ ಬಾಲಕೃಷ್ಣ