ಪುಣೆ (ಮಹಾರಾಷ್ಟ್ರ):ಏಕದಿನ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ನಲ್ಲಿ ಸ್ಥಾನ ಪಡೆಯಲು ಗೆಲುವು ಬಯಸಿ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಕ್ರಿಕೆಟ್ ತಂಡಗಳು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ಸೆಣಸಾಡುತ್ತಿವೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು ಅಫ್ಘನ್ ಬೌಲರ್ಗಳ ವಿರುದ್ಧ ಸಾಧಾರಣ ಪೈಪೋಟಿ ನೀಡಿತು. ಸಿಂಹಳೀಯರು 49.3 ಓವರ್‌ಗಳಿಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 241 ರನ್ ಗಳಿಸಿದರು.
ಇಂಗ್ಲೆಂಡ್ ಮತ್ತು ಪಾಕಿಸ್ತಾನದ ವಿರುದ್ಧ ಜಯ ದಾಖಲಿಸಿರುವ ಅಫ್ಘನ್ ಅದೇ ಆತ್ಮವಿಶ್ವಾಸದಲ್ಲಿ ಸಿಂಹಳೀಯರನ್ನು ಕಟ್ಟಿಹಾಕಲು ಚಿಂತಿಸುತ್ತಿದೆ. ಮೊದಲ ಮೂರು ಪಂದ್ಯಗಳನ್ನು ಕಳೆದುಕೊಂಡ ಲಂಕಾ, ನಂತರ ಎರಡರಲ್ಲಿ ವಿಜಯಿಯಾಯಿತು. ಇದೀಗ ಅಫ್ಘನ್ ವಿರುದ್ಧ ಗೆದ್ದು ಹ್ಯಾಟ್ರಿಕ್ ವಿಜಯ ದಾಖಲಿಸುವ ಉತ್ಸಾಹದಲ್ಲಿದೆ.
ಪುಣೆ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸರಾಸರಿಯ ಪ್ರಕಾರ 300 ರನ್ ಕಲೆಹಾಕಬಹುದು. ಆದರೆ ಮೊದಲು ಬ್ಯಾಟಿಂಗ್ಗೆ ಮೈದಾನಕ್ಕಿಳಿದ ಸಿಂಹಳೀಯರಿಗೆ ಅಫ್ಘನ್ ಬೌಲರ್‌ಗಳು ಕಾಡಿದ್ದರಿಂದ 59 ರನ್ ಕೊರತೆ ಎದುರಿಸಿದೆ. 50 ಓವರ್ ಮಾದರಿಯಲ್ಲಿ 300 ರನ್ ತಲುಪಲು ಒಂದು ದೊಡ್ಡ ಜತೆಯಾಟ ಅಥವಾ ಎರಡು ಅರ್ಧಶತಕದ ಪಾಲುದಾರಿಕೆಯಾದರೂ ಬರಬೇಕು. ಆದರೆ ಶ್ರೀಲಂಕಾದ ಬ್ಯಾಟರ್ಗಳು ಪಿಚ್ಗೆ ನೆಲೆ ನಿಲ್ಲದಂತೆ ಅಫ್ಘನ್ ಬೌಲರ್‌ಗಳು ನೋಡಿಕೊಂಡರು. ಇದರಿಂದ ಸಿಂಹಳೀಯರಿಂದ ಯಾವುದೇ ದೊಡ್ಡ ಜೊತೆಯಾಟವಾಗಲಿ, ಒಬ್ಬ ಬ್ಯಾಟರ್ನ ಪ್ರದರ್ಶನವಾಗಲೀ ಮೂಡಿ ಬರಲಿಲ್ಲ.