ಪುಣೆ (ಮಹಾರಾಷ್ಟ್ರ): ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ ಮತ್ತು ಅಜ್ಮತುಲ್ಲಾ ಒಮರ್ಜಾಯ್ ಅವರ ಅರ್ಧಶತಕದ ಇನ್ನಿಂಗ್ಸ್ ನೆರವಿನಿಂದ ಶ್ರೀಲಂಕಾ ವಿರುದ್ಧ ಅಫ್ಘಾನಿಸ್ತಾನ 4.4 ಓವರ್ ಮತ್ತು 7 ವಿಕೆಟ್‌ಗಳ ಗೆಲುವು ದಾಖಲಿಸಿದೆ. ಈ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನಕ್ಕೆ ಇದು ಮೂರನೇ ಗೆಲುವಾಗಿದೆ. ಬಾಕಿ ಇರುವ ಮೂರು ಪಂದ್ಯಗಳನ್ನು ಗೆದ್ದಲ್ಲಿ ಸೆಮೀಸ್ ಪ್ರವೇಶ ಪಡೆಯುವ ಸಾಧ್ಯತೆ ಗೋಚರಿಸಿದೆ. ಅತ್ತ ಶ್ರೀಲಂಕಾ ಸೋಲು ಪಾಕಿಸ್ತಾನದ ಸೆಮೀಸ್ ಕನಸು ಜೀವಂತವಾಗಿ ಇರಿಸಿದೆ.
2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಸಾಮಾನ್ಯ ಎಂದು ಪರಿಗಣಿಸಿದ್ದ ದಿಗ್ಗಜರಿಗೆ ಮೂರು ಗೆಲುವಿನ ಮೂಲಕ ಉತ್ತರ ಕೊಟ್ಟಿದೆ. ಅಲ್ಲದೇ ವಿಶ್ವಕಪ್ ಸೆಮೀಸ್ ಹೋರಾಟಕ್ಕೆ ನಾವೂ ಇದ್ದೇವೆ ಎಂಬ ಸಂದೇಶವನ್ನು ತಂಡ ಬಲವಾಗಿ ರವಾನಿಸಿತು. ಸ್ಪಿನ್ ಬೌಲಿಂಗ್ನಲ್ಲಿ ಮಾತ್ರ ಅಫ್ಘನ್ ತಂಡವನ್ನು ಬಲಿಷ್ಠ ಎಂದು ಹೇಳಲಾಗುತ್ತಿತ್ತು. ಪ್ರಸ್ತುತ ವಿಶ್ವಕಪ್ನಲ್ಲಿ ಅಫ್ಘನ್ನರು ಬ್ಯಾಟಿಂಗ್ ಸಾಮರ್ಥ್ಯವನ್ನೂ ತೋರಿದ್ದಾರೆ. ಕಳೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 8 ವಿಕೆಟ್ನಿಂದ ಗೆದ್ದರೆ, ಇಂದು 7 ವಿಕೆಟ್‌ಗಳ ಜಯ ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗಿಳಿದ ಶ್ರೀಲಂಕಾ ಅಫ್ಘಾನ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ವಿಫಲವಾಯಿತು. ತಂಡದಲ್ಲಿ ಅನುಭವಿ ಬ್ಯಾಟರ್ಗಳು ದೊಡ್ಡ ಜೊತೆಯಾಟ ನೀಡುವಲ್ಲಿ ಎಡವಿದರು. ಇದರಿಂದ ತಂಡ 49.3 ಓವರ್ಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 241ರನ್ ಮಾತ್ರ ಕಲೆಹಾಕಿತು.
ಈ ಗುರಿ ಬೆನ್ನತ್ತಿದ ಅಫ್ಘಾನ್ಗೆ ದಿಲ್ಶನ್ ಮಧುಶಂಕ ಆರಂಭಿಕ ಆಘಾತ ನೀಡಿದರು. ವಿಶ್ವಕಪ್ನಲ್ಲಿ ಅಫ್ಘನ್ ಪರ ಉತ್ತಮ ಬ್ಯಾಟಿಂಗ್ ಮಾಡಿದ್ದ ರಹಮಾನುಲ್ಲಾ ಗುರ್ಬಾಜ್ ಶೂನ್ಯಕ್ಕೆ ವಿಕೆಟ್ ಕೊಟ್ಟರು. ಅದರೆ ಎರಡನೇ ವಿಕೆಟ್ಗೆ ಒಂದಾದ ಇಬ್ರಾಹಿಂ ಜದ್ರಾನ್ ಮತ್ತು ರಹಮತ್ ಶಾ ಸಿಂಹಳೀಯ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಎರಡನೇ ವಿಕೆಟ್ಗೆ 73 ರನ್ಗಳ ಪಾಲುದಾರಿಕೆ ಹಂಚಿಕೊಂಡಿತು. ರನ್ ಗಳಿಸುವ ಮುನ್ನ ವಿಕೆಟ್ ನಷ್ಟವಾದರೂ ಈ ಜೊತೆಯಾಟ ತಂಡಕ್ಕೆ ಆಸರೆ ಆಯಿತು. 39 ರನ್ ಗಳಿಸಿ ಆಡುತ್ತಿದ್ದ ಇಬ್ರಾಹಿಂ ಜದ್ರಾನ್ ದಿಲ್ಶನ್ ಮಧುಶಂಕಗೆ ವಿಕೆಟ್ ಕೊಟ್ಟರು.