ಚೆನ್ನೈ (ತಮಿಳುನಾಡು): ಅಫ್ಘಾನಿಸ್ತಾನ ತಂಡ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದೆ. ಸತತ ಏಳು ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದ ಅಫ್ಘನ್ನರು ವಿಶ್ವಕಪ್ ವೇದಿಕೆಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಚೆನ್ನೈನ ಚೆಪಾಕ್ ಮೈದಾನದಲ್ಲಿಂದು ಪಾಕಿಸ್ತಾನ ನೀಡಿದ್ದ 282 ರನ್ ಗುರಿಯನ್ನು 6 ಬಾಲ್ ಹಾಗೂ 8 ವಿಕೆಟ್ ಉಳಿಸಿಕೊಂಡು ಜಯ ದಾಖಲಿಸಿದ್ದಾರೆ. ಇದರಿಂದ ಪ್ಲೇ ಆಫ್ ಸ್ಪರ್ಧೆಯಲ್ಲಿ ತಾನೂ ಇರುವುದಾಗಿ ಅಫ್ಘನ್ ಸಂದೇಶ ರವಾನಿಸಿದೆ.
275ಕ್ಕೂ ಹೆಚ್ಚಿನ ಗುರಿ ನೀಡಿದ್ದಾಗ ಈವರೆಗೆ ಏಕದಿನ ಪಂದ್ಯದಲ್ಲಿ ಗೆಲುವು ಕಂಡಿರುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನಕ್ಕೆ ಅಫ್ಘನ್ ಸೋಲಿಸಿತು. ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಪಾಕಿಸ್ತಾನ ನೀಡಿದ 275+ ಗುರಿಯನ್ನು ಅಫ್ಘನ್ ಭೇದಿಸಿತು. ಇದು ಅಫ್ಘನ್ಗೆ ಒಟ್ಟಾರೆ ಮೂರು ವಿಶ್ವಕಪ್‌ನಲ್ಲಿ ಮೂರನೇ ಗೆಲುವಾಗಿದೆ. 2015ರ ವಿಶ್ವಕಪ್‌ನಲ್ಲಿ ಸ್ಕಾಟ್ಲ್ಯಾಂಡ್ ವಿರುದ್ಧ ಗೆಲುವು ದಾಖಲಿಸಿತ್ತು. 2019ರ ವಿಶ್ವಕಪ್‌ನಲ್ಲಿ ಒಂದೂ ಗೆಲುವು ಕಾಣದೆ ತವರಿಗೆ ಮರಳಿತ್ತು. ಈ ಬಾರಿ ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಮಣಿಸಿದೆ.
ಅಫ್ಘಾನ್ ಪರ ಬೆಸ್ಟ್ ವಿಶ್ವಕಪ್ ಪಾದಾರ್ಪಣೆ: ಯುವ ಸ್ಪಿನ್ನರ್ ನೂರ್ ಅಹ್ಮದ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಚೊಚ್ಚಲ ಪಂದ್ಯದಲ್ಲಿ ಆಫ್ಘನ್ ಪರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. ನೂರ್ ಅವರ 10 ಓವರ್‌ಗಳಲ್ಲಿ 49 ರನ್ ಕೊಟ್ಟು 3 ವಿಕೆಟ್ ಕಬಳಿಸಿದರು. ನೂರ್ ಪಿಚ್ಗೆ ಹೊಂದಿಕೊಂಡಿದ್ದ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್, ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್ಗಳನ್ನು ಇಂದಿನ ಪಂದ್ಯದಲ್ಲಿ ಕಬಳಿಸಿದರು. ಇದು ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲಿ ಅಫ್ಘನ್ ಪರ ಒಬ್ಬ ಬೌಲರ್ ಗಳಿಸಿದ ಉತ್ತಮ ಅಂಕಿಅಂಶ ಎನಿಸಿಕೊಂಡಿದೆ. ಇವರಿಗೂ ಮೊದಲು 2015ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶಪೂರ್ ಜದ್ರಾನ್ 20 ರನ್ ಕೊಟ್ಟು 2 ವಿಕೆಟ್ ಪಡೆದಿದ್ದರು.