ಕರ್ನಾಟಕ

karnataka

ETV Bharat / sports

ಬಿಸಿಸಿಐ ಮನವಿ ಬಳಿಕ ಇಂದೋರ್​ ಮೈದಾನದ ಕಳಪೆ ರೇಟಿಂಗ್​ ಬದಲಿಸಿದ ಐಸಿಸಿ

ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ 3ನೇ ಟೆಸ್ಟ್​ ಪಂದ್ಯಕ್ಕೆ ಆತಿಥ್ಯ ವಹಿಸಿದ್ದ ಇಂದೋರ್​ನ ಹೋಳ್ಕರ್​ ಮೈದಾನಕ್ಕೆ ನೀಡಲಾಗಿದ್ದ ಕಳಪೆ ರೇಟಿಂಗ್​ ಅನ್ನು ಐಸಿಸಿ ಬದಲಿಸಿದೆ.

ಇಂದೋರ್​ ಮೈದಾನದ ಕಳಪೆ ರೇಟಿಂಗ್​ ಬದಲಿಸಿದ ಐಸಿಸಿ
ಇಂದೋರ್​ ಮೈದಾನದ ಕಳಪೆ ರೇಟಿಂಗ್​ ಬದಲಿಸಿದ ಐಸಿಸಿ

By

Published : Mar 27, 2023, 4:36 PM IST

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್​ಗೆ ಬಳಸಲಾಗಿದ್ದ ಮಧ್ಯಪ್ರದೇಶದ ಇಂದೋರ್​ನ ಹೋಳ್ಕರ್​ ಪಿಚ್​ಗೆ "ಕಳಪೆ" ರೇಟಿಂಗ್​ ನೀಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅದನ್ನು ಬದಲಿಸಿ "ಸರಾಸರಿಗಿಂತ ಕಡಿಮೆ" (below average) ಎಂದು ಪರಿಗಣಿಸಿದೆ. ಇದರಿಂದ ಟೆಸ್ಟ್​ ಪಂದ್ಯಗಳ ಆಯೋಜನೆಯ ನಿರ್ಬಂಧ ಶಿಕ್ಷೆಯಿಂದ ತಪ್ಪಿಸಿಕೊಂಡಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದಿದ್ದ ಮೂರನೇ ಟೆಸ್ಟ್​ ಮೂರನೇ ದಿನದ ಮೊದಲ ಅವಧಿಯಲ್ಲೇ ಮುಕ್ತಾಯವಾಗಿತ್ತು. ಅಂದರೆ 2 ದಿನ ಮತ್ತು ಕೆಲ ಗಂಟೆಗಳಲ್ಲಿ ಪಂದ್ಯ ಮುಗಿದಿತ್ತು. ಇದು ಟೆಸ್ಟ್​ ಕ್ರಿಕೆಟ್​ಗೆ ಸೂಕ್ತವಾದ ಮೈದಾನವಲ್ಲ ಎಂಬ ಆರೋಪ ಕೇಳಿಬಂದಿತ್ತು. ಸ್ಪಿನ್ನರ್​ಗಳಿಗೆ ಪೂರ್ಣ ನೆರವು ನೀಡಿದ್ದ ಪಿಚ್​ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ)"ಕಳಪೆ" ರೇಟಿಂಗ್​ ಮತ್ತು 3 ಋಣಾತ್ಮಕ ಅಂಕಗಳನ್ನು ನೀಡಿತ್ತು. ಐಸಿಸಿಯ ನಿರ್ಧಾರದ ವಿರುದ್ಧ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿರುವ ಐಸಿಸಿ ಕಳಪೆ ಬದಲಾಗಿ ಸರಾಸರಿಗಿಂತ ಕಡಿಮೆ ಎಂಬ ರೇಟಿಂಗ್​ ನೀಡಿದೆ.

ಓದಿ:ಸುನಿಲ್​ ನರೈನ್​ vs ಶಾರ್ದೂಲ್​​ ಠಾಕೂರ್​: ಕೆಕೆಆರ್​ ನಾಯಕತ್ವ ಯಾರಿಗೆ?

ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಅವರು, ಹೋಳ್ಕರ್​ ಮೈದಾನ ಬ್ಯಾಟ್ ಮತ್ತು ಚೆಂಡಿನ ನಡುವೆ ಸಾಕಷ್ಟು ಸಮತೋಲನವನ್ನು ಒದಗಿಸಿಲ್ಲ. ಶುಷ್ಕ ಮೈದಾನವಾಗಿದ್ದು ಪೂರ್ಣ ಸ್ಪಿನ್ನರ್​ಗಳಿಗೆ ನೆರವು ನೀಡಿತ್ತು. ಸಮತೋಲಿತ ಪಿಚ್​ ಇದಾಗಿಲ್ಲ ಎಂದು ಹೇಳಿದ್ದರು.

ಪಂದ್ಯದ ಫಲಿತಾಂಶವೇನು?:ಇಂದೋರ್‌ನಲ್ಲಿ ನಡೆದ 3ನೇ ಟೆಸ್ಟ್‌ನ ಮೊದಲನೇ ದಿನದಾಟದಲ್ಲಿ 14 ವಿಕೆಟ್‌ಗಳು ಉರುಳಿದ್ದವು. ಒಟ್ಟಾರೆ ಪಂದ್ಯದಲ್ಲಿ 31 ವಿಕೆಟ್‌ಗಳಲ್ಲಿ 26 ವಿಕೆಟ್​ ಸ್ಪಿನ್ನರ್‌ಗಳು ಪಡೆದಿದ್ದರು. ಟೆಸ್ಟ್ ಕೇವಲ 2 ದಿನ ಮತ್ತು ಒಂದು ಅವಧಿಯಷ್ಟು ಮಾತ್ರ ನಡೆದಿತ್ತು. ಆಸ್ಟ್ರೇಲಿಯಾ ಪಂದ್ಯವನ್ನು 9 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಮೊದಲ ಎರಡು ಪಂದ್ಯಗಳಲ್ಲಿ ನಾಗ್ಪುರ ಮತ್ತು ನವದೆಹಲಿಯಲ್ಲಿ ಬಳಸಲಾದ ಪಿಚ್‌ಗಳು ಸಹ ಸ್ಪಿನ್ನರ್‌ಗಳಿಗೆ ಸಹಾಯಕವಾಗಿದ್ದವು. ಐಸಿಸಿ ಈ ಪಿಚ್​ಗಳಿಗೆ 'ಸರಾಸರಿ' ರೇಟಿಂಗ್ ನೀಡಿತ್ತು.

ಐಸಿಸಿ ರೇಟಿಂಗ್ ಬದಲಿಸಿದ್ದೇಕೆ?:ಐಸಿಸಿಯ ಕಳಪೆ ರೇಟಿಂಗ್​ ವಿರುದ್ಧ ಬಿಸಿಸಿಐ ಮೇಲ್ಮನವಿ ಸಲ್ಲಿಸಿತ್ತು. ಐಸಿಸಿ ಮೇಲ್ಮನವಿ ಸಮಿತಿ ಸದಸ್ಯರಾದ ವಾಸಿಂ ಖಾನ್​ ಮತ್ತು ರೋಜರ್​ ಹಾರ್ಪರ್​ ಅವರಿದ್ದ ತಂಡ ಟೆಸ್ಟ್​ ಪಂದ್ಯ ವಿಡಿಯೋ ತುಣುಕುಗಳನ್ನು ವೀಕ್ಷಣೆ ಮಾಡಿತು. ಪಂದ್ಯದ ರೆಫ್ರಿ ಮಾರ್ಗಸೂಚಿಗಳನ್ನು ಅನುಸರಿಸಿದ್ದರೂ, ಬೌನ್ಸ್​​ ಪಿಚ್​ ಇದಲ್ಲವಾಗಿದ್ದರಿಂದ ಸಮಿತಿ ಸದಸ್ಯರು ಕಳಪೆ ರೇಟಿಂಗ್​ ಅನ್ನು ಬದಲಿಸಲು ಒಪ್ಪಿಕೊಂಡರು.

ಅದರಂತೆ ಹೋಲ್ಕರ್ ಸ್ಟೇಡಿಯಂನ ಪಿಚ್ ಅನ್ನು 'ಸರಾಸರಿಗಿಂತ ಕಡಿಮೆ' ಎಂದು ರೇಟ್ ಮಾಡಿ, ಮೂರು ಋಣಾತ್ಮಕ ಅಂಕಗಳ ಬದಲಾಗಿ ಒಂದು ಡಿಮೆರಿಟ್ ಅಂಕ ನೀಡಲು ತೀರ್ಮಾನಿಸಿತು. 4 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 2-1 ರಿಂದ ಗೆಲ್ಲುವ ಮೂಲಕ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ಗೆ ಪ್ರವೇಶ ಪಡೆಯಿತು.

ಓದಿ: ಇಂದೋರ್​ ಪಿಚ್​ಗೆ ಕಳಪೆ ರೇಟಿಂಗ್​ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಇನ್ನಿಲ್ಲವೇ ಅವಕಾಶ

ABOUT THE AUTHOR

...view details