ಮೆಲ್ಬೋರ್ನ್ :ಭದ್ರತೆಯ ಹೆಸರನ್ನೇಳಿ ನಮ್ಮ ತಂಡದ ಕೆಲವು ಆಟಗಾರರು ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದನ್ನು ತಿರಸ್ಕರಿಸಿದರೆ, ಅದರಿಂದ ನನಗೇನು ಆಶ್ಚರ್ಯವಾಗುವುದಿಲ್ಲ ಎಂದು ಆಸೀಸ್ ವೇಗಿ ಜೋಶ್ ಹೇಜಲ್ವುಡ್ ಹೇಳಿದ್ದಾರೆ.
ಆಸ್ಟ್ರೇಲಿಯಾ ತಂಡ 24 ವರ್ಷಗಳ ಬಳಿಕ ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದೆ. 1998ರಲ್ಲಿ ಮಾರ್ಕ್ ಟೇಲರ್ ನೇತೃತ್ವದಲ್ಲಿ ಆಸೀಸ್ ತಂಡದ ಕೊನೆಯ ಬಾರಿ ಏಷ್ಯನ್ ರಾಷ್ಟ್ರಕ್ಕೆ ಪ್ರವಾಸ ಕೈಗೊಂಡಿತ್ತು. ಆದರೆ, ಇಷ್ಟು ವರ್ಷಗಳಲ್ಲಿ ಭದ್ರತಾ ಸಮಸ್ಯೆಯ ಕಾರಣ ಪಾಕ್ ಪ್ರವಾಸಕ್ಕೆ ಸಿಎ ಒಪ್ಪಿರಲಿಲ್ಲ.
"ಈ ಪ್ರವಾಸಕ್ಕಾಗಿ ತೆರೆಯ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟರ್ ಅಸೋಸಿಯೇಷನ್ ಸಾಕಷ್ಟು ಕೆಲಸ ಮಾಡುತ್ತಿವೆ. ಆದ್ದರಿಂದ ಆಟಗಾರರಲ್ಲಿ ನಂಬಿಕೆಯು ಸಾಕಷ್ಟು ಹೆಚ್ಚಾಗಿದೆ. ಆದರೆ, ಖಂಡಿತವಾಗಿಯೂ ಕೆಲವು ಆಟಗಾರರಲ್ಲಿ ಪ್ರವಾಸ ಕುರಿತು ಕಾಳಜಿಯಿದೆ. ಅವರಲ್ಲಿ ಕೆಲವರು ಪ್ರವಾಸದಿಂದ ಹಿಂದೆ ಸರಿದರೆ ನನಗೆ ಆಶ್ಚರ್ಯವಾಗುವುದಿಲ್ಲ" ಎಂದು cricket.com.auಗೆ ನೀಡಿದ ಸಂದರ್ಶನದಲ್ಲಿ ಹೇಜಲ್ವುಡ್ಹೇಳಿದ್ದಾರೆ.