ಮುಂಬೈ:ಲಖನೌ ಸೂಪರ್ ಜೈಂಟ್ಸ್ ಫ್ರಾಂಚೈಸಿ ಹರಾಜಿಗೂ ಮುನ್ನ ಡ್ರಾಫ್ಟ್ ಮಾಡಿಕೊಂಡಿರುವ ಆಸ್ಟ್ರೇಲಿಯಾದ ಆಲ್ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಕಳೆದ ಎರಡು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಯುವ ಆಟಗಾರ ಶಿಮ್ರಾನ್ ಹೆಟ್ಮಾಯರ್ ಜೊತೆಗೆ ಪಂದ್ಯವನ್ನು ಫಿನಿಷ್ ಮಾಡುವ ಜೊತೆಗೆ, ಬೌಲಿಂಗ್ನಲ್ಲೂ ತಂಡಕ್ಕೆ ಕೊಡುಗೆ ನೀಡಿದ್ದಾರೆ.
ಆಸೀಸ್ ಕ್ರಿಕೆಟಿಗ ಈ ವರ್ಷ ಜೇಸನ್ ಹೋಲ್ಡರ್, ದೀಪಕ್ ಹೂಡ, ಕೃನಾಲ್ ಪಾಂಡ್ಯ ಸೇರಿದಂತೆ ಆಲ್ರೌಂಡರ್ಗಳ ದಂಡನ್ನೇ ಹೊಂದಿರುವ ಕೆಎಲ್ ರಾಹುಲ್ ನೇತೃತ್ವದ ಲಖನೌ ಸೂಪರ್ ಜೈಂಟ್ಸ್ ಪರ ಆಡಲಿದ್ದಾರೆ. ಸ್ಟೋಯ್ನಿಸ್ರನ್ನು LSG ಫ್ರಾಂಚೈಸಿ 9.2 ಕೋಟಿ ರೂ ನೀಡಿ ಡ್ರಾಫ್ಟ್ ಮಾಡಿಕೊಂಡಿದೆ.
ಬ್ಯಾಕ್ ಸ್ಟೇಜ್ ವಿತ್ ಬೋರಿಯಾ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟೋಯ್ನಿಸ್ ತಮಗಿಂತಲೂ ಉತ್ತಮವಾಗಿ ಪಂದ್ಯಗಳನ್ನು ಫಿನಿಷ್ ಮಾಡಬಲ್ಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಜೊತೆಗೆ ನಡೆಸಿದ್ದ ಹಿಂದಿನ ಒಂದು ಸಂಭಾಷಣೆ ಮೆಲುಕು ಹಾಕಿದ್ದಾರೆ.
"ಸೆಮಿಫೈನಲ್ಸ್ ಪಂದ್ಯವೊಂದರಲ್ಲಿ ಅವರು ನಮ್ಮ ತಂಡವನ್ನು(ಡೆಲ್ಲಿ ಕ್ಯಾಪಿಟಲ್ಸ್) ತಂಡವನ್ನು ಏಕಾಂಗಿಯಾಗಿ ಸೋಲಿಸಿದ್ದರು. ನಾನು ಪಂದ್ಯದ ನಂತರ ಧೋನಿ ಅವರೊಂದಿಗೆ ಸಾಕಷ್ಟು ಮಾತನಾಡಿದ್ದೆ. ಅವರು ತಮ್ಮ ದಿನಚರಿಯ ಬಗ್ಗೆ ನನ್ನೊಂದಿಗೆ ಮಾತನಾಡಿದರು. ಅವರು ಆಟವನ್ನು ಹೇಗೆ ನೋಡುತ್ತಾರೆ, ಒತ್ತಡವನ್ನು ಹೇಗೆ ನಿಯಂತ್ರಿಸಿಕೊಳ್ಳುತ್ತಾರೆ, ಭಾವನೆಗಳನ್ನು ಹೇಗೆ ನಿರ್ವಹಿಸುತ್ತಾರೆ. ಹೀಗೆ ಹಲವಾರು ವಿಷಯಗಳ ಬಗ್ಗೆ ಅವರು ನನ್ನ ಜೊತೆಗೆ ಮಾಡಿದ್ದರು" ಎಂದು ಸ್ಯೋಯ್ನಿಸ್ ಬಹಿರಂಗ ಪಡಿಸಿದರು.
ಒಬ್ಬ ಆಟಗಾರ ತಂಡದ ಎಲ್ಲ ಸದಸ್ಯರು ಮತ್ತು ಆತನ ಜೊತೆಗೆ ಬ್ಯಾಟಿಂಗ್ ಮಾಡುವವರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಎನ್ನುವುದು ಧೋನಿಯವರ ನಂಬಿಕೆಯಾಗಿದೆ ಎಂದು 2021ರ ಟಿ20 ವಿಶ್ವಕಪ್ನಲ್ಲಿ ಫಿನಿಷರ್ ಆಗಿ ಆಸ್ಟ್ರೇಲಿಯಾಗೆ ಒಂದೆರಡು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದ 32 ವರ್ಷದ ಆಟಗಾರ ಹೇಳಿದ್ದಾರೆ.
ಪಂದ್ಯವನ್ನು 18 ಓವರ್ಗಳಿಗೆ ಮುಗಿಸುವುದಕ್ಕೆ ಮತ್ತು ರನ್ಗಳಿಸುವುಕ್ಕೆ ಅನೇಕ ದಾರಿಗಳಿವೆ. ಆದರೆ, ಪಂದ್ಯವನ್ನು ಹತ್ತಿರಕ್ಕೆ ತಂದಿದ್ದ ವೇಳೆ ನೀವು ಔಟಾಗಿ ಆ ಜವಾಬ್ದಾರಿಯನ್ನು ಬೇರೊಬ್ಬರ ಮೇಲೆ ಹಾಕಬೇಕೆಂದರೆ ತಂಡದ ಜೊತೆಗೆ ಮತ್ತು ನಿಮ್ಮ ಜೊತೆಗೆ ಬ್ಯಾಟಿಂಗ್ ಮಾಡುವ ಇತರ ಬ್ಯಾಟರ್ಗಳ ಜೊತೆಗೆ ಒಳ್ಳೆಯ ಬಾಂಧವ್ಯವನ್ನು ಬೆಳೆಸಿಕೊಂಡಿರಬೇಕು ಎಂದು ಅವರು ನನಗೆ ತಿಳಿಸಿದ್ದರು ಎಂದು ಸ್ಟೋಯ್ನಿಸ್ ಹೇಳಿದರು.
ಧೋನಿ ಇರುವವರೆಗೂ ಸೋಲಿಲ್ಲ:ಎಂಎಸ್ ಧೋನಿಯ ಫಿನಿಷಿಂಗ್ ಶೈಲಿಯ ಬಗ್ಗೆ ಮಾತನಾಡುತ್ತಾ, ಧೋನಿ ಮೈದಾನದಲ್ಲಿದ್ದರೆ ಪ್ರೇಕ್ಷಕರಿಗೆ, ಎದುರಾಳಿಗಳು ಮತ್ತು ಪ್ರತಿಯೊಬ್ಬರೂ ಕೂಡ ಈ ಪಂದ್ಯ ಇನ್ನೂ ಮುಗಿದಿಲ್ಲ ಎಂದೇ ಯೋಚಿಸುತ್ತಾರೆ. ಕೊನೆಯ ಓವರ್ನಲ್ಲಿ 20 ರನ್ ಅಗತ್ಯವಿದ್ದರೂ ಕೂಡ ಪ್ರತಿಯೊಬ್ಬರು ಧೋನಿ ಅದನ್ನೂ ಮೀರಿಸಬಲ್ಲರೂ ಎಂದೇ ಯೋಚಿಸುತ್ತಾರೆ.
ಆ ಕಲೆಯನ್ನು ಧೋನಿ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ ಮತ್ತು ಅದು ದೊಡ್ಡ ಪ್ರಮಾಣದಲ್ಲಿ ಜನರ ಮೇಲೆ ಪ್ರಭಾವ ಬೀರಿದೆ. ನಾನು ಕೂಡ ಅವರಂತೆ ತಾಳ್ಮೆಯಿಂದ ಇದ್ದು, ಜವಾಬ್ದಾರಿ ತೆಗೆದುಕೊಂಡು ಪಂದ್ಯಗಳನ್ನು ಫಿನಿಷ್ ಮಾಡಲು ಬಯಸುತ್ತೇನೆ ಎಂದು ಆಸ್ಟ್ರೇಲಿಯನ್ ಆಲ್ರೌಂಡರ್ ತಿಳಿಸಿದ್ದಾರೆ.
ಇದನ್ನೂ ಓದಿ:IPL 2022 : ಮೆಗಾ ಹರಾಜಿನ ನಂತರ ಎಲ್ಲಾ ತಂಡಗಳಲ್ಲಿರುವ ಆಟಗಾರರ ಸಂಪೂರ್ಣ ವಿವರ ಇಲ್ಲಿದೆ ನೋಡಿ