ಮುಂಬೈ: ಶ್ರೀಲಂಕಾ ವಿರುದ್ಧ ಮುಂಬರುವ ಟೆಸ್ಟ್ ಸರಣಿಗೆ ಭಾನುವಾರ ಬಿಸಿಸಿಐ ರೋಹಿತ್ ನೇತೃತ್ವದ 18 ಸದಸ್ಯರ ತಂಡವನ್ನು ಪ್ರಕಟಿಸಿದ್ದು, ಈ ತಂಡದಿಂದ ಹಿರಿಯ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾರನ್ನು ಕೈಬಿಡಲಾಗಿದೆ. ಅಲ್ಲದೆ ಟೀಮ್ ಮ್ಯಾನೇಜ್ಮೆಂಟ್ ತಮ್ಮನ್ನು ಇನ್ನು ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವುದಿಲ್ಲ ಎಂದು ತಿಳಿಸಿದೆ ಎಂದು ಸಹಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿದಲ್ಲಿ 3ನೇ ಟೆಸ್ಟ್ ಪಂದ್ಯವನ್ನು ಸೋತ ನಂತರ ವೃದ್ಧಿಮಾನ್ ಸಹಾ ಜೊತೆಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಭವಿಷ್ಯದ ಆಯ್ಕೆ ಕುರಿತು ಮಾತನಾಡಿರುವ ವಿಚಾರವನ್ನು ಸಹಾ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.
ರಾಹುಲ್ ಭಾಯ್ ಕೊನೆಯ ಟೆಸ್ಟ್ ಪಂದ್ಯದ ನಂತರ ನನ್ನನ್ನು ಅವರ ರೂಮಿಗೆ ಕರೆದರು. ಅವರು ಪ್ಲೇಯಿಂಗ್ ಇಲೆವೆನ್ನಲ್ಲಿ ನನ್ನನ್ನು ಏಕೆ ಆಯ್ಕೆ ಮಾಡಲಿಲ್ಲ ಎಂದು ಕಾರಣ ಹೇಳಲು ಕರೆದಿರಬಹುದು ಎಂದು ಭಾವಿಸಿದ್ದೆ. ಏಕೆಂದರೆ ನ್ಯೂಜಿಲ್ಯಾಂಡ್ ವಿರುದ್ಧ ಕಾನ್ಪುರ ಟೆಸ್ಟ್ನಲ್ಲಿ ನಾನು ಪೇಯ್ನ್ ಕಿಲ್ಲರ್ ತೆಗೆದುಕೊಂಡು ಬ್ಯಾಟಿಂಗ್ ಮಾಡಿದ್ದಾಗ ದಾದಿ(ಗಂಗೂಲಿ) ನನಗೆ ಅಭಿನಂದನೆ ಸಲ್ಲಿಸಿದ್ದರು. ಇದು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಹಾಗಾಗಿ ದ್ರಾವಿಡ್ ಭಾಯ್ ನನ್ನನ್ನು ಕರೆದಾಗ, ಅವರ ಯೋಜನೆಗಳನ್ನು ನನ್ನ ಬಳಿ ಹೇಳಬಹುದೇನೊ ಎಂದುಕೊಂಡಿದ್ದೆ.
ಆದರೆ, ನಾವು ಮಾತನಾಡಲು ಶುರು ಮಾಡಿದಾಗ ದ್ರಾವಿಡ್ ಭಾಯ್, ಈ ವಿಚಾರವನ್ನು ಹೇಗೆ ಹೇಳಬೇಕೊ ನನಗೆ ತಿಳಿಯುತ್ತಿಲ್ಲ. ಆದರೆ, ಸ್ವಲ್ಪ ದಿನಗಳಿಂದ, ಕೆಲವು ಆಯ್ಕೆಗಾರರು ಮತ್ತು ಟೀಮ್ ಮ್ಯಾನೇಜ್ಮೆಂಟ್ ಹೊಸ ವಿಕೆಟ್ ಕೀಪರ್ ಪ್ರಯತ್ನಿಸಲು ಬಯಸುತ್ತಿದ್ದಾರೆ ಎಂದರು. ನಾನು ಅವರನ್ನು ಈ ನಿರ್ಧಾರಕ್ಕೆ ನನ್ನ ವಯಸ್ಸು ಅಥವಾ ಫಿಟ್ನೆಸ್ ಕಾರಣವಾಗಿದೆಯೇ ಎಂದು ಕೇಳಿದೆ. ಅದಕ್ಕೆ ಅವರು, ಇದು ನಿಮ್ಮ ವಯಸ್ಸು ಅಥವಾ ಕಾರ್ಯಕ್ಷಮತೆಯ ವಿಷಯವಲ್ಲ. ಅವರು ಯುವ ಪ್ರತಿಭೆಯ ಕಡೆ ನೋಡುತ್ತಿದ್ದಾರೆ ಮತ್ತು ನೀವು 11ರಬಳಗದಲ್ಲಿ ಆಡುತ್ತಿಲ್ಲವಾದ್ದರಿಂದ ನಾವು ಯುವ ಪ್ರತಿಭೆಯ ಕಡೆಗೆ ನೋಡುತ್ತಿದ್ದೇವೆ ಎಂದು ಹೇಳಿದರೆಂದು ಸಹಾ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.