ಮುಂಬೈ: ಪಂಜಾಬ್ ಕಿಂಗ್ಸ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರಿಗೆ ಸಾಕಷ್ಟು ನಾಯಕತ್ವ ಕೌಶಲ್ಯಗಳ ಕೊರತೆಯಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ವಿಶ್ಲೇಷಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿದ್ದರೂ ರಾಹುಲ್ ಒಮ್ಮೆಯೂ ಪ್ಲೇ ಆಫ್ ತಲುಪಲು ಸಾಧ್ಯವಾಗಿಲ್ಲ. ಅವರ ನಾಯಕತ್ವದಲ್ಲಿ ಪಂಜಾಬ್ 11ರಲ್ಲಿ ಗೆಲುವು ಸಾಧಿಸಿದ್ದರೆ, 14 ಪಂದ್ಯಗಳಲ್ಲಿ ಸೋಲು ಕಂಡಿದೆ. 2020ರಲ್ಲಿ 6ನೇ ಸ್ಥಾನ ಪಡೆದರೆ, ಈ ಬಾರಿಯೂ ಆಡಿರುವ 13 ಪಂದ್ಯಗಳಲ್ಲಿ 5ರಲ್ಲಿ ಮಾತ್ರ ಜಯ ಸಾಧಿಸಿ ಟೂರ್ನಿಯಿಂದ ಹೊರಬಿದ್ದಿದೆ. ಕರ್ನಾಟಕ ಬ್ಯಾಟರ್ ರಾಹುಲ್ ನಾಯಕನಾಗಿ ತುಂಬಾ ಅನುಸರಿಸುವ ಗುಣಕ್ಕೆ ಮಾರು ಹೋಗಿದ್ದಾರೆ. ಮೃದುವಾಗಿ ಮಾತನಾಡುತ್ತಾರೆ ಅವರಲ್ಲಿ ಚುರುಕುತನವಿಲ್ಲ ಎಂದು ಜಡೇಜಾ ಅಭಿಪ್ರಾಯ ಪಟ್ಟಿದ್ದಾರೆ.
" ರಾಹುಲ್ ಕಳೆದ ಎರಡು ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿರುವುದನ್ನು ನೋಡಿದ್ದೇವೆ. ಆದರೆ, ನನಗೆ ಅವರು ಒಬ್ಬ ನಿಜವಾದ ಲೀಡರ್ ಎಂಬ ಭಾವನೆ ಯಾವಾಗಲೂ ಅನ್ನಿಸಿಲ್ಲ. ಈ ತಂಡವೂ ಉತ್ತಮವಾಗಿ ಅಥವಾ ಕೆಟ್ಟದಾಗಿ ಪ್ರದರ್ಶನ ತೋರಿದಾಗ ನಮಗೆ ಆಡುವ 11ರ ಬಳಗವನ್ನು ಕೆಎಲ್ ರಾಹುಲ್ ಆಯ್ಕೆ ಮಾಡಿರಬಹುದು ಎಂದೂ ಅನ್ನಿಸುವುದಿಲ್ಲ, ನಿಮಗೆ ಅನ್ನಿಸುತ್ತದೆಯೇ?" ಎಂದು ಕ್ರಿಕ್ ಬಜ್ ಸಂವಾದದ ವೇಳೆ ತಿಳಿಸಿದ್ದಾರೆ.