ಬ್ರಿಸ್ಟಲ್: ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡಕ್ಕೆ ಭಾರತೀಯ ವನಿತೆಯರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದ ಶೆಫಾಲಿ ವರ್ಮಾ ಪದಾರ್ಪಣೆ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿಸಿದ್ದು ಕೇವಲ 4 ರನ್ನುಗಳಿಂದ ಶತಕ ವಂಚಿತರಾಗಿದ್ದರು.
ಪಂದ್ಯದ ಎರಡನೇ ದಿನದ ಅಂತ್ಯದ ನಂತರ ಮಾತನಾಡಿದ ಶೆಫಾಲಿ, 'ನಾನು ಎಂದಿಗೂ ನನ್ನ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಯಾವುದೇ ಪಂದ್ಯ ಆಡುವಾಗ ಆತ್ಮವಿಶ್ವಾಸದಿಂದ ಇರುವುದಕ್ಕೆ ಗಮನ ನೀಡುತ್ತೇನೆ' ಎಂದು ಹೇಳಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ವನಿತೆಯರು 9 ವಿಕೆಟ್ ಕಳೆದುಕೊಂಡು 396 ರನ್ಗಳಿಸಿದ್ದರು. ಈ ವೇಳೆ ತಂಡ ಡಿಕ್ಲೇರ್ ಘೋಷಿಸಿಕೊಂಡಿತು. ನಾಯಕಿ ಹೀದರ್ ನೈಟ್ 95, ಸೋಫಿಯಾ ಡಂಕ್ಲೇ 74 ಹಾಗೂ ಟಮ್ಮಿ ಬ್ಯೂಮಾಂಟ್ 66 ತಾಳ್ಮೆಯ ಆಟವಾಡಿದರು.