ಲಂಡನ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ವೇಳೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕೇವಲ 20 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ಔಟಾದ ರೀತಿಗೆ ದಿಗ್ಗಜ ಸುನೀಲ್ ಗವಾಸ್ಕರ್ ಸೇರಿದಂತೆ ಕೆಲವು ಮಾಜಿ ಕ್ರಿಕೆಟಿಗರು ಹಾಗೂ ವಿಶ್ಲೇಷಕರು ತಂತ್ರಗಾರಿಕೆ ವೈಫಲ್ಯ ಎಂದಿದ್ದರು. ಆದರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಏಕಾಗ್ರತೆಯ ಕೊರತೆಯಿಂದ ಟೀಮ್ ಇಂಡಿಯಾ ನಾಯಕ ವಿಕೆಟ್ ಒಪ್ಪಿಸಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿರಾಟ್ ಕೊಹ್ಲಿ ಭಾನುವಾರ 20 ರನ್ಗಳಿಸಿ ಸ್ಯಾಮ್ ಕರ್ರನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ್ದರು. 20120ರಿಂದ ಶತಕದ ಬರ ಎದುರಿಸುತ್ತಿರುವ ಕೊಹ್ಲಿ ಈ ಪಂದ್ಯದಲ್ಲಿ ಪಡೆದ ಆರಂಭ ನೋಡಿ ಅಭಿಮಾನಿಗಳು ಶತಕದ ಬರ ನೀಗಬಹುದು ಎಂದು ಆಲೋಚಿಸಿದ್ದರು. ಆದರೆ, ಕೊಹ್ಲಿ ಆಟ 20 ರನ್ಗಳಿಗೆ ಮೀಸಲಾಯಿತು. ರಾಥೋರ್ ಪ್ರಕಾರ ಕೊಹ್ಲಿ ಆಟದಲ್ಲಿ ಯಾವುದೇ ಸಮಸ್ಯೆಯಿಲ್ಲ, ಆದರೆ, ಅವರು ಏಕಾಗ್ರತೆ ಕೊರತೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.