ಜೋಹಾನ್ಸ್ಬರ್ಗ್: ವಿರಾಟ್ ಕೊಹ್ಲಿ ವಿವಾದಗಳಿಂದ ದೂರ ಉಳಿಯಲು ಮಾಧ್ಯಮಗೋಷ್ಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿರುವ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಮುಂಬರುವ ಟೆಸ್ಟ್ ಪಂದ್ಯ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಲಿದ್ದು, ಅಂದು ಅವರು ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ ಯಾವುದೇ ಪಂದ್ಯಕ್ಕೂ ಮುನ್ನ ನಾಯಕ ಮಾಧ್ಯಮಗೋಷ್ಟಿಗೆ ಹಾಜರಾಗುತ್ತಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಧ್ಯಮದವರೊಂದಿಗೆ ಮಾತನಾಡಿರಲಿಲ್ಲ. ಆದರೆ ನಂತರ ಜನವರಿ 3(ಸೋಮವಾರ)ರಿಂದ ನಡೆಯಲಿರುವ ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂದು ಕೊಹ್ಲಿ ಬದಲಿಗೆ ಕೋಚ್ ರಾಹುಲ್ ದ್ರಾವಿಡ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕೊಹ್ಲಿ ಅವರು ಈ ಹಿಂದೆ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಕುರಿತು ನೀಡಿರುವ ಹೇಳಿಕೆಗಳಿಂದ ಗೊಂದಲ ಉಂಟಾಗಿರುವುದರಿಂದ ತಾವಾಗಿಯೇ ಮಾಧ್ಯಮಗೋಷ್ಟಿ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ ದ್ರಾವಿಡ್ ಅದೆಲ್ಲಾ ಕೇವಲ ಊಹಾಪೋಹ, ಕೊನೆಯ ಪಂದದಲ್ಲಿ ಅವರು ಹಾಜರಾಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.