ನವದೆಹಲಿ :ಇಂಗ್ಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್, ಮಾನಸಿಕ ಆರೋಗ್ಯ ಸಮಸ್ಯೆಯಿಂದಾಗಿ ಭಾರತ ವಿರುದ್ಧದ ತವರಿನ ಟೆಸ್ಟ್ ಸರಣಿಯ ವೇಳೆ ಅನಿರ್ದಿಷ್ಟಾವಧಿಗೆ ಕ್ರಿಕೆಟ್ನಿಂದ ವಿಶ್ರಾಂತಿ ತೆಗೆದುಕೊಂಡಿದ್ದರು. ಐಪಿಎಲ್ನ ಮೊದಲಾರ್ಧದ ವೇಳೆ ಗಾಯಕ್ಕೆ ಒಳಗಾಗಿದ್ದ ಅವರು, 4 ತಿಂಗಳ ಹಿಂದೆ ತಮ್ಮ ತೋರು ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
ಸುದೀರ್ಘ ವಿರಾಮದ ಬಳಿಕ ಈಗ ಬೆನ್ ಸ್ಟೋಕ್ಸ್ ಮತ್ತೆ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಮುಂದಿನ ಡಿಸೆಂಬರ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಗೆ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಈ ತಿಂಗಳ ಆರಂಭದಲ್ಲಿ ಬೆನ್ ಸ್ಟೋಕ್ಸ್ ತಮ್ಮ ಎಡಗೈ ತೋರು ಬೆರಳಿನ ಶಸ್ತ್ರ ಚಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಂಡಿರುವ ಸ್ಟೋಕ್ಸ್ ಇತ್ತೀಚೆಗೆ ನೆಟ್ ಅಭ್ಯಾಸದಲ್ಲಿ ನಿರತರಾಗಿದ್ದ, ವಿಡಿಯೋವನ್ನು ಕೂಡಾ ಅವರು ಹಂಚಿಕೊಂಡಿದ್ದರು. ಈ ಮೂಲಕ ಬೆನ್ ಸ್ಟೋಕ್ಸ್ ಶೀಘ್ರದಲ್ಲಿಯೇ ಇಂಗ್ಲೆಂಡ್ ತಂಡಕ್ಕೆ ಮರಳುವ ಸೂಚನೆ ನೀಡಿದ್ದರು. ಆದರೆ, ಅದೀಗ ನಿಜವಾಗಿದ್ದು ಮುಂದಿನ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರವಾಗಿ ಕಣಕ್ಕಿಳಿಯಲು ಸ್ಟೋಕ್ಸ್ ಸಿದ್ಧರಾಗಿದ್ದಾರೆ. ಈ ಬಗ್ಗೆ ಇಸಿಬಿಯಿಂದ ಅಧಿಕೃತ ಮಾಹಿತಿ ದೊರೆತಿದೆ.