ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ಅಶ್ವಿನ್ ಚೆಂಡು ಬ್ಯಾಟರ್ಗೆ ತಾಗಿದ ನಂತರವೂ ರನ್ ತೆಗೆದುಕೊಂಡಿದ್ದ ವಿಚಾರವಾಗಿ ಭಾರತೀಯ ಸ್ಪಿನ್ನರ್ ಮೇಲೆ ಕ್ರೀಡಾಸ್ಫೂರ್ತಿ ಮರೆತ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅಶ್ವಿನ್, ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಸರಣಿ ಟ್ವೀಟ್ಗಳ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮಂಗಳವಾರ ನಡೆದ ಕೆಕೆಆರ್ ಪಂದ್ಯದ ವೇಳೆ ಪಂತ್ ಜೊತೆ ಸಿಂಗಲ್ ರನ್ ಪೂರ್ಣಗೊಳಿಸಿದ್ದ ಅಶ್ವಿನ್, ಫೀಲ್ಡರ್ ಚೆಂಡನ್ನು ಥ್ರೋ ಮಾಡಿದ ನಂತರ ಮತ್ತೊಂದು ಸಿಂಗಲ್ ತೆಗೆದುಕೊಂಡಿದ್ದರು. ಆದರೆ ಚೆಂಡು ಡೆಲ್ಲಿ ನಾಯಕ ಪಂತ್ಗೆ ತಾಗಿದ್ದರಿಂದ ಕೆಕೆಆರ್ ನಾಯಕ ಮಾರ್ಗನ್, ಅಶ್ವಿನ್ 2ನೇ ರನ್ ತೆಗೆದುಕೊಂಡಿದ್ದನ್ನು ಪ್ರಶ್ನಿಸಿದ್ದರು. ನಂತರದ ಓವರ್ನಲ್ಲಿ ಅಶ್ವಿನ್ ಔಟಾಗುತ್ತಿದ್ದಂತೆ ಮಾರ್ಗನ್ ಮತ್ತು ಸೌಥಿ ಇಬ್ಬರು ಅಶ್ವಿನ್ ಜೊತೆಗೆ ಮಾತಿನ ಚಕಮಕಿ ನಡೆಸಿದ್ದರು. ಈ ಘಟನೆ ಅಂದು ಅಂತ್ಯವಾದರೂ ಅಶ್ವಿನ್ 2ನೇ ರನ್ ತೆಗೆದುಕೊಂಡ ನಡೆಯನ್ನು ಶೇನ್ವಾರ್ನ್ ಸೇರಿದಂತೆ ಹಲವರು ಪ್ರಶ್ನಿಸಿ ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ್ದಾರೆ ಎಂದು ಹೇಳಿದ್ದರು.
ವಿವಾದ ಅತಿರೇಕಕ್ಕೆ ಹೋಗುತ್ತಿದ್ದಂತೆ ಅಶ್ವಿನ್ ಸರಣಿ ಟ್ವೀಟ್ಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಫೀಲ್ಡರ್ ಚೆಂಡು ಎಸೆದಿದ್ದನ್ನು ನೋಡಿ 2ನೇ ರನ್ಗಾಗಿ ನಾನು ತಿರುಗಿದೆ. ಆದರೆ ಚೆಂಡು ರಿಷಭ್ ಪಂತ್ಗೆ ತಾಗಿದೆ ಎಂಬುದು ನನಗೆ ಗೊತ್ತಿರಲಿಲ್ಲ. ನಾನು ನೋಡಿದರೆ ಓಡುತ್ತೇನೆಯೇ? ಸಹಜವಾಗಿಯೇ ನಾನು ಓಡಿದೆ ಮತ್ತು ಅದನ್ನು ನಾನು ಅನುಮತಿಸುತ್ತೇನೆ. ಮಾರ್ಗನ್ ಹೇಳಿದ ಹಾಗೆ ನಾನು ನಾಚಿಕೆಗೇಡಿನವನಾ?. ಖಂಡಿತ ಇಲ್ಲ. ಎಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.